ಶಿರಸಿ: ಸಮಾಜದ ಶ್ರೇಯೋಭಿವೃದ್ಧಿಯೇ ನಮ್ಮ ಸಂವಿಧಾನದ ಅಂತಿಮ ಆಶಯವಾಗಿದೆ ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆ ವ್ಯಕ್ತಿಯ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ ಹೇಳಿದರು.
14ನೇ ಭಾರತ ಗಣರಾಜ್ಯೋತ್ಸವ ರಾಷ್ಟ್ರದ್ವಜಾರೋಹಣ ನೆರವೇರಿಸಿ ಸಾರ್ವಜನಿಕ ಸಂದೇಶ ನೀಡಿದ ಅವರು, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿರುವ ಭಾರತ ಸಂವಿಧಾನದ ಆಶಯದಂತೆ ನಡೆದುಕೊಳ್ಳಲು ನಮ್ಮ ಸರ್ಕಾರ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ನಾವೆಲ್ಲರೂ ಅಭಿವೃದ್ಧಿಯೊಂದಿಗೆ, ಜಾತ್ಯಾತೀತ, ಧರ್ಮಾತೀತ, ಭ್ರಾತೃತ್ವ ನೆಲೆಯಲ್ಲಿ ತಾಯ್ನಾಡಾದ ಕರ್ನಾಟಕ ರಾಜ್ಯವನ್ನು ಹಾಗೂ ಭಾರತ ದೇಶವನ್ನು ಸಶಕ್ತ, ಸದೃಢವಾಗಿ ರೂಪಿಸಲು ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕಟ್ಟಿಕೊಟ್ಟದ್ದು ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದ ಹಿರಿಯರ ತಂಡ. ಅವರ ಅವಿರತ ಪ್ರಯತ್ನದ ಫಲವಾಗಿ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ. ಅವಿಚ್ಛಿನ್ನ ದೇಶಪ್ರೇಮ ಮತ್ತು ಅದ್ಭುತ ಅನುಭವೀ ಪಾಂಡಿತ್ಯದಿಂದಾಗಿ ನಮಗೆ ಈ ಸಂವಿಧಾನ ದೊರೆತಿದೆ. ವಿಶ್ವದಲ್ಲಿಯೇ ಅತ್ಯಂತ ಸುದೀರ್ಘವಾದ, ಅತ್ಯಂತ ಸುಸಂಬದ್ಧವಾದ ಲಿಖಿತ ಸಂವಿಧಾನ ನಮ್ಮದು ಎಂದು ಬಣ್ಣಿಸಿದರು.
ಪ್ರಸಕ್ತ ಸಾಲಿನಿಂದ ಯಶಸ್ವಿನಿ ಯೋಜನೆ ಪುನಃ ಆರಂಭಿಸಲಾಗಿದ್ದು, ಜಿಲ್ಲೆಯಲ್ಲಿ 79,839 ಜನ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ 126 ಗ್ರಾಮಗಳಿಗೆ ಮನೆ ಮನೆಗೆ ನೀರು ಪೂರೈಸಲು ರೂ. 651.43 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. 324ಕಾಮಗಾರಿಗಳು ಮುಕ್ತಾಗೊಂಡಿವೆ. 245 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ಕಾಮಗಾರಿಗಳು ವಿವಿಧ ಪ್ರಕ್ರಿಯೆಗಳಲ್ಲಿವೆ. ಈವರೆಗೆ ರೂ.252 ಕೋಟಿ ವೆಚ್ಚ ಮಾಡಲಾಗಿದೆ ಎಂದರು.