ಶಿರಸಿ: ಪರಿಸರ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ಕೆಲಸ ಮಾಡುತ್ತಿರುವ ಸ್ಕೊಡ್ವೆಸ್ ವತಿಯಿಂದ 74 ನೇ ಗಣರಾಜ್ಯೋತ್ಸವವನ್ನು ನಗರದ ಮರಾಠಿಕೊಪ್ಪದಲ್ಲಿರುವ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಸ್ಕೋಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸ್ಮರಣೆ ನಮ್ಮಿಂದಾಗಬೇಕು. ಸ್ವಾತಂತ್ರ್ಯ ದುರುಪಯೋಗಪಡಿಸಿಕೊಳ್ಳದೇ ಜವಾಬ್ದಾರಿಯಿಂದ ನಡೆಯಬೇಕು. ಹಕ್ಕಿನ ಪ್ರತಿಪಾದನೆ ನಡೆಯುತ್ತಿದೆಯೇ ಹೊರತು, ಜವಾಬ್ದಾರಿ ನಿರ್ವಹಣೆ ಕಾಣುತ್ತಿಲ್ಲ. ಹಕ್ಕಿನ ಉಲ್ಲಂಘನೆ ಎಂದಿಗೂ ಸಲ್ಲ. ಜೊತೆಗೆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕಿದೆ. ಎಲ್ಲರೊಡಗೂಡಿ ದೇಶಕಟ್ಟುವ ಕಾರ್ಯ ನಮ್ಮಿಂದಾಗಲಿ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ಕೂರ್ಸೆ ಸಂವಿಧಾನದ ಬಗ್ಗೆ ಹೆಚ್ಚಿನ ಅರಿವು ನಮಗೆಲ್ಲ ಆಗಬೇಕು. ಪ್ರಮುಖವಾಗಿ ಹಕ್ಕು ಮತ್ತು ಕರ್ತವ್ಯವನ್ನು ನಮಗೆ ಸಂವಿಧಾನ ಕೊಟ್ಟಿದೆ. ಸಂವಿಧಾನ ಶಿಲ್ಪಿಯಾಗಿರುವ ಡಾ. ಅಂಬೇಡ್ಕರ್ ಗೆ ನಾವೆಲ್ಲರೂ ಸದಾ ಗೌರವ ಸಲ್ಲಿಸಬೇಕು. ರಾಷ್ಟ್ರದ ಏಳ್ಗೆಗೆ ನಾವೆಲ್ಲರೂ ಶ್ರಮಿಸಬೇಕು ಎಂದರು.
ಇದೇ ವೇಳೆ ಸಂಸ್ಥೆಯ ವತಿಯಿಂದ ಹಿರಿಯ ಸಾಮಾಜಿಕ ಕಾರ್ಯಕರ್ತ ಕಾಶೀನಾಥ ಮೂಡಿ, ಹಿರಿಯ ಚಿಂತಕ ವಿ ಪಿ ಹೆಗಡೆ ವೈಶಾಲಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಮಾಜಿಕ ಕಾರ್ಯಕರ್ತ ಕಾಶೀನಾಥ ಮೂಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜೀ ಸೇರಿದಂತೆ ಹೋರಾಟಗಾರರ ಬಲಿದಾನವನ್ನು ಸ್ಮರಿಸಬೇಕು. ಗಾಂಧೀಜಿಯವರ ಸರ್ವೋದಯ ಮಾರ್ಗ ನಮಗೆಲ್ಲ ಆದರ್ಶ.
ಇನ್ನೋರ್ವ ಸನ್ಮಾನಿತರು ವಿ.ಪಿ.ಹೆಗಡೆ ವೈಶಾಲಿ ಮಾತನಾಡಿ, ಇಂದು ಬಹುತೇಕರು ಹಣದ ಬಿಂದೆ ಬಿದ್ದಿದ್ದಾರೆ. ಯಾವ ಉದ್ದೇಶಕ್ಕೆ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಂದು ಮನುಷ್ಯನ ನೈತಿಕ ಸೂಚ್ಯಂಕ ಅಧಃಪತನದತ್ತ ಸಾಗುತ್ತಿದೆ. ನಾವೆಲ್ಲ ನೈತಿಕತೆಯನ್ನು ಬಲಗೊಳಿಸುವತ್ತ ಹೆಜ್ಜೆಯನ್ನಿಡಬೇಕು. ಜೀವನಕ್ಕೆ ನೆಮ್ಮದಿ ಮುಖ್ಯ. ನೆಮ್ಮದಿಯನ್ನು ಮನಸ್ಸಿನಲ್ಲಿ ಕಾಣಬೇಕಿದೆ. ಇನ್ನೊಬ್ಬರ ಒಳಿತನ್ನು ಬಯಸುವುದು ಎಲ್ಲ ಧರ್ಮಗಳ ಆಶಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಸರಸ್ವತೀ ಎನ್.ರವಿ ಮಾತನಾಡಿ, ನಾವು ದೇಶಕ್ಕೆ ಹೇಗೆ ಸಹಕಾರಿಯಾಗಿ ಬಾಳಬೇಕೆಂಬುದರ ಕುರಿತಾಗಿ ಯೋಚಿಸಬೇಕು ಎಂದರು. ಧ್ವಜಾರೋಹಣದ ನಂತರದಲ್ಲಿ ಶಿರಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಸ್ಥೆಯ ಸಿಬ್ಬಂದಿಗಳಿಂದ ರಾಷ್ಟ್ರಧ್ವಜ ಹಿಡಿದು ತಿರಂಗಾ ರ್ಯಾಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ದಯಾನಂದ ಆಗಾಸೆ, ಸಿಬ್ಬಂದಿಗಳಾದ ಗಣಪತಿ ನಾಯ್ಕ, ಪ್ರಶಾಂತ ನಾಯಕ ಸೇರಿದಂತೆ ಅನೇಕರು ಇದ್ದರು.