ಸಿದ್ದಾಪುರ: ತಾಲೂಕಿನ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿರುವ ಹವ್ಯಕ ಸಮುದಾಯದ ಪ್ರತಿಭೆಗಳಿಗಾಗಿ ಪ್ರತಿಬಿಂಬ ಉತ್ತರ ಅಡಿಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಜ.14ರಂದು ಬೆಳಿಗ್ಗೆ 9.30ರಿಂದ ಗೋಸ್ವರ್ಗ ಭಾನ್ಕುಳಿಯಲ್ಲಿ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಲು ಅವಕಾಶವಿದೆ.
ಜ.13ರಂದು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಆರತಿ ತಾಟಿನ ಸ್ಪರ್ಧೆ ನಡೆಯಲಿದ್ದು, ಅಂದು ಮಧ್ಯಾಹ್ನ 2.30 ಕ್ಕೆ ಸ್ಪರ್ಧಾಳುಗಳು ತಮ್ಮ ಸ್ಪರ್ಧಾ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶವಿದೆ. 14ರಂದು 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆ ಕಂಠಪಾಠ, 12ನೇ ಅಧ್ಯಾಯದ ಮೇಲೆ ನಡೆಯಲಿದ್ದು, ಚಿತ್ರಕಲಾ ಸ್ಪರ್ಧೆ ಹಾಗೂ 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆ, 12ನೇ ಅಧ್ಯಾಯದ ಕಂಠಪಾಠ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ ನಡೆಯಲಿದೆ. 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯು ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದಾಪುರದ ಹವ್ಯಕರ ಕೊಡುಗೆ ವಿಷಯದ ಕುರಿತು ನಡೆಯಲಿದೆ ಹಾಗೂ ರಸಪ್ರಶ್ನೆ ಸ್ಪರ್ಧೆ ಸಾಮಾನ್ಯ ವಿಷಯದ ಮೇಲೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ನೀಡಲಿರುವ ವಿದ್ಯಾಪ್ರೋತ್ಸಾಹಧನ ವಿತರಣಾ ಸಮಾರಂಭ ಸಹ ನಡೆಯಲಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯವನ್ನು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಲಿದ್ದು, ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಲಿರುವರು. ಹವ್ಯಕ ಮಹಾಮಂಡಳ ಹಾಗೂ ಗೋಸ್ವರ್ಗದ ಅಧ್ಯಕ್ಷರಾದ ಆರ್.ಎಸ್. ಹೆಗಡೆ ಹರಗಿ ಮತ್ತು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಪಿ.ಶಾಸ್ತ್ರೀ ಬಿಳಗಿ ಅಭ್ಯಾಗತರಾಗಿ ಆಗಮಿಸಲಿದ್ದಾರೆ.
ವಯಸ್ಸಿನ ಯಾವುದೇ ಮಿತಿ ಇಲ್ಲದೆ ಮಹಿಳೆಯರಿಗೆ ಹವ್ಯಕ ಸಾಂಪ್ರಾದಾಯಿಕ ಹಾಡಿನ ಸ್ಪರ್ಧೆಗೆ ಅವಕಾಶವಿದೆ ಎಂದು ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹಾಗೂ ಪ್ರತಿಬಿಂಬ ಉತ್ತರದ ಸಂಚಾಲಕ ಜಿ.ಜಿ.ಹೆಗಡೆ ಬಾಳಗೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.