ಭಟ್ಕಳ: ರಾಷ್ಟ್ರೀಯ ಯುವ ದಿನ-2023 ಪ್ರಯುಕ್ತ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ‘ಸೃಷ್ಠಿ 2023′ ಅಂತರ್ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಯು ಯಶಸ್ವಿಯಾಗಿ ಸಂಪನ್ನವಾಯಿತು.
ಸ್ವಾಮಿ ವಿವೇಕಾನಂದರ ಪ್ರತಿರೂಪಕ್ಕೆ ಮಾಲಾರ್ಪಣೆಯನ್ನು ಮಾಡಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ಎಜ್ಯಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುರೇಶ್ ವಿ ನಾಯಕ ರವರು “ಜೀವನದಲ್ಲಿ ಶಿಸ್ತು, ಸಂಯಮ, ಏಕಾಗ್ರತೆಯನ್ನು ಅಳವಡಿಸಿಕೊಂಡು, ಉನ್ನತ ಸ್ಥರದ ಆಲೋಚನೆಯೊಂದಿಗೆ ಯಶಸ್ಸನ್ನು ಸಾಧಿಸಬೇಕು” ಎಂದು ಕಿವಿಮಾತು ಹೇಳಿದರು.
ದೇಶಪಾಂಡೆ ಸ್ಕಿಲ್ಲಿಂಗ್‌ನ ಸಹಭಾಗಿತ್ವದೊಂದಿಗೆ ಜರುಗಿದ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ರಾಘವೇಂದ್ರ ಕಾಮತ ಮಾತನಾಡಿ, ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ, ಯಶಸ್ಸುಗಳಿಸಬೇಕು ಎಂದು ಹೇಳಿ ಶುಭಹಾರೈಸಿದರು. ಜಿಲ್ಲೆಯ ಹಲವಾರು ಕಾಲೇಜುಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನಸೆಳೆದದ್ದು ವಿಶೇಷವಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.