ಕಾರವಾರ: ಎನ್ಪಿಎಸ್ ರದ್ದುಗೊಳಿಸಿ ಎಲ್ಲ ನೌಕರರಿಗೂ ಓಪಿಎಸ್ ಜಾರಿಗೊಳಿಸಲು ಒತ್ತಾಯಿಸುವ ಮತ್ತು ಈ ಕುರಿತು ಹೋರಾಟದಲ್ಲಿ ತೊಡಗಿರುವ ನೌಕರರ ಸಂಘಗಳ ಜೊತೆ ತಕ್ಷಣವೇ ಮಾತುಕತೆ ನಡೆಸಿ ಅವರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಸಿಪಿಐಎಂ ಒತ್ತಾಯಿಸಿದೆ.
ರಾಜ್ಯದ ವಿವಿಧ ನೌಕರರ ಸಂಘಗಳು, ಸಾವಿರಾರು ನೌಕರರು, ಹಿರಿಯ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಕಳೆದ 14 ದಿನಗಳಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ಜಾರಿಗೊಳಿಸುತ್ತಾ ಬಂದ, ಜನ ವಿರೋಧಿಯಾದ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ನೀತಿಗಳ ಭಾಗವಾಗಿ, ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸುವ ದುರುದ್ದೇಶದಿಂದ, ದೇಶದಾದ್ಯಂತ ನಡೆದ ನೌಕರರ ಪ್ರತಿರೋಧದ ನಡುವೆಯು, ಪಿಂಚಣಿ ನಿಧಿ ನಿರ್ವಹಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತು. ಇದು, ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿದ್ದ ಹಳೆಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಲು ಕೇಂದ್ರ ಸರಕಾರ 2004ರಿಂದ ಹಾಗೂ ಕರ್ನಾಟಕ ರಾಜ್ಯ ಸರಕಾರ 2006ರಿಂದ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಮತ್ತು ಹೊಸ ನೌಕರರ ಸಾಮಾಜಿಕ ಭದ್ರತೆಯನ್ನು ಪೂರ್ಣವಾಗಿ ಕೈಬಿಟ್ಟು ನೌಕರರ ಉಳಿತಾಯದ ನಿಧಿಯಲ್ಲೇ ಹೊಸ ಪಿಂಚಣಿಯ ಯೋಜನೆಯ ಹೆಸರಿನ ಕಾರ್ಪೋರೇಟ್ ಲೂಟಿಯನ್ನು ಜಾರಿಗೆ ತರಲು ನೆರವಾಯಿತು.
ಪಿಎಫ್ಆರ್ಡಿಎಯ ತೂಗು ಕತ್ತಿ ಯಾವಾಗ ಬೇಕಾದರೂ ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಎರಗಬಹುದೆಂದು ಹೆದರಿದ ಹಿರಿಯ ನೌಕರರು ಹಾಗೂ ಹೊಸ ಪಿಂಚಣಿ ಯೋಜನೆಯು ತಮಗೆ ಇಳಿಗಾಲದಲ್ಲಿ ನೆರವಾಗದು ಬದಲಿಗೆ ತಮ್ಮ ಉಳಿತಾಯವು ತಮಗೆ ಧಕ್ಕುವ ಯಾವುದೇ ಖಾತರಿ ಇಲ್ಲವೆ ತದುಕೊಂಡ ಹೊಸ ಪಿಂಚಣಿ ಯೋಜನೆಯ ನೌಕರರು ಈಗ ಮತ್ತೊಮ್ಮೆ ಚಳುವಳಿಗಿಳಿದಿದ್ದಾರೆ. ಖಂಡಿತಾ, ಸರಕಾರಿ ನೌಕರರು ಕೇಳುತ್ತಿರುವ ಹಕ್ಕೊತ್ತಾಯಗಳು ಮತ್ತು ಸಾಮಾಜಿಕ ಭದ್ರತೆಯ ವಿಚಾರ ಸಮರ್ಪಕವಾದವುಗಳಾಗಿವೆ. ನೌಕರರ ಈ ಹೋರಾಟಕ್ಕೆ ಮತ್ತು ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಸಾಮಾಜಿಕ ಭದ್ರತೆ ಒದಗಿಸುವ ಹಳೆಯ ಪಿಂಚಣಿ ಜಾರಿಗೊಳಿಸಬೇಕೆಂಬ ಹಕ್ಕೊತ್ತಾಯಗಳನ್ನು ಸಿಪಿಐಎಂ ರಾಜ್ಯ ಸಮಿತಿಯು ಸಂಪೂರ್ಣವಾಗಿ ಬೆಂಬಲಿಸಲು ನಿರ್ಧರಿಸಿದೆ. ಈ ಕೂಡಲೇ, ಕರ್ನಾಟಕ ಸರಕಾರ ಹೋರಾಟ ನಿರತ ಸಂಘಗಳ ನಾಯಕರ ಜೊತೆ ಮಾತುಕತೆ ನಡೆಸಿ ಅವರ ಹಕ್ಕೊತ್ತಾಯಗಳನ್ನು ಪರಿಹರಿಸುವಂತೆ ಸಿಪಿಐಎಂ ಜಿಲ್ಲಾ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.
ಅದೇ ರೀತಿ, ನೌಕಕರರ ಸಾಮಾಜಿಕ ಭದ್ರತೆಗೆ ಬೆದರಿಕೆಯಾಗಿರುವ PFRDA ಕಾಯ್ದೆಯನ್ನು ವಾಪಾಸು ಪಡೆಯಬೇಕು. ನೌಕರರ ಮಾಸಿಕ ಉಳಿತಾಯವನ್ನು ವಾಪಾಸು ನೀಡಲು ಕ್ರಮವಹಿಸಬೇಕೆಂದು ಸಿಪಿಐಎಂ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಿದೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.