ಭಟ್ಕಳ: ಪ್ರತಿ ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಹಸಿವು ತಣಿಸುವ ಅನ್ನಪೂರ್ಣೆಯರಾಗಿ ಕಾರ್ಯನಿರ್ವಹಿಸುವ ಬಿಸಿಯೂಟ ಸಿಬ್ಬಂದಿಗಳು ಅವರ ಆರೋಗ್ಯವನ್ನು ಗಮದಲ್ಲಿಟ್ಟು ತಮ್ಮ ಸುರಕ್ಷತಾ ಕ್ರಮ ಪಾಲಿಸುವದರ ಜೊತೆಗೆ ಸ್ವಚ್ಛತೆ, ಸ್ವನಿಷ್ಠತೆಗೂ ಆದ್ಯತೆ ನೀಡಬೇಕೆಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ ಚಿಕ್ಕನ್ಮನೆ ಕರೆ ನೀಡಿದರು.
ಅವರು ಶಿರಾಲಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ತಾಲೂಕು ಮಟ್ಟದ ಮುಖ್ಯ ಅಡುಗೆಯವರು ಮತ್ತು ಸಹಾಯಕ ಅಡುಗೆಯವರ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ತರಬೇತಿ ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಉದ್ಘಾಟಿಸಿ, ಸರಕಾರ ನಿಗದಿಪಡಿಸಿದ ಮೊತ್ತದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯವಂತ ಆಹಾರ ತಯಾರಿಸಿ ನೀಡುವ ಗುರುತರ ಜವಾಬ್ದಾರಿ ನಿರ್ವಹಿಸುವ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು. ಶಾಲಾ ಮುಖ್ಯಶಿಕ್ಷಕ ಡಿ.ಐ.ಮೊಗೇರ ಉಪಸ್ಥಿತರಿದ್ದರು.
ತಾಲೂಕು ಅಗ್ನಿಶಾಮಕ ಠಾಣಾಧಿಕಾರಿ ಎಸ್.ರಮೇಶರವರ ನೇತ್ರತ್ವದಲ್ಲಿ ಅಗ್ನಿ ಸುರಕ್ಷತಾ ಕ್ರಮವಾಗಿ ಪ್ರಾತ್ಯಕ್ಷಿತೆಯನ್ನು ಏರ್ಪಡಿಸಿದ್ದು ಗಮನ ಸಳೆಯಿತು. ತಯಾರಿಸಿದ ಅಡುಗೆ ಸ್ಪರ್ಧೆಯಲ್ಲಿ ಕುಂಟವಾಣಿ ಕ್ಲಸ್ಟರಿನ ಹೇಮಲತ ಜೈನ್ ಪ್ರಥಮ, ಮಾವಿನಕಟ್ಟೆ ಕ್ಲಸ್ಟರಿನ ವೀಣಾ ಶೆಟ್ಟಿ ದ್ವಿತೀಯ ಹಾಗೂ ಗುಂಡ್ಲಕಟ್ಟಾ ಕ್ಲಸ್ಟರಿನ ಪಾರ್ವತಿ ಮಡಿವಾಳ ತೃತೀಯ ಸ್ಥಾನ ಪಡೆದರು. ಭಾಗವಹಿಸಿದ ಎಲ್ಲಾ 15 ಸ್ಪರ್ಧಾಳುಗಳಿಗೆ ¸ಮಾಧಾನಕರ ಬಹುಮಾನ ವಿತರಿಸಲಾಯಿತು.
ಬಹುಮಾನವನ್ನು ನಿವೃತ್ತ ಶಿಕ್ಷಕಿ ಶಮ್ಸಾದ್ ಸೈಯದ್ ಅಸದುಲ್ಲಾ, ರಂಜನ್ ಗ್ಯಾಸ್ ಏಜೆನ್ಸಿ, ರಫಾತ್ ಗ್ಯಾಸ್ ಏಜೆನ್ಸಿಯವರು ಪ್ರಾಯೋಜಿಸಿದ್ದರು. ನಿರ್ಣಾಯಕರಾಗಿ ನಾಗೇಶ ಮಡಿವಾಳ, ಬಿ.ಕೆ.ನಾಯ್ಕ, ಸುರೇಶ ಮುರ್ಡೇಶ್ವರ, ಜಯಶ್ರೀ ಆಚಾರಿ, ಎಸ್.ಆರ್.ಮೇಸ್ತಾ ನಿರ್ವಹಿಸಿದರು. ಅಡುಗೆಯವರ ತರಬೇತಿ ಕಾರ್ಯಗಾರ ಯಶಸ್ವಿಗೆ ಅಕ್ಷರದಾಸೋಹ ವಿಭಾಗದ ಕೃಷ್ಣ ಎಚ್.ಗೊಂಡ ಮತ್ತು ಸಿಬ್ಬಂದಿ ರಂಜಿತಾ ಬಾಗಲ ಸಹಕರಿಸಿದರು.