ಯಲ್ಲಾಪುರ: ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಎರಡು ದಿನಗಳ ಕಾಲ ‘ಬೆಳಕು’ ಎಂಬ ವಿಶೇಷ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸ್ನೇಹಸಾಗರದ 25ನೇ ಬೆಳ್ಳಿ ಹಬ್ಬದ ಆಚರಣೆಯ ಪ್ರಯುಕ್ತ ಈ ಶಾಲೆಯಲ್ಲಿ ಓದಿದ ಹಳೇ ವಿದ್ಯಾರ್ಥಿಗಳು, ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಪುತ್ತೂರ, ಮತ್ತು ಸ್ನೇಹ ಸಾಗರದ ಆಡಳಿತ ಮಂಡಳಿಯ ಸಹಯೋಗದಲ್ಲಿ ಎರಡು ದಿನಗಳ ವಿಜ್ಞಾನ ಪ್ರಾಯೋಗಿಕ ಕಾರ್ಯಾಗಾರ, ಆಪ್ತ ಸಮಾಲೋಚನೆ ಚಟುವಟಟಿಕೆಗಳು ನಡೆದವು.
ಪ್ರಾಯೋಗಿಕ ಕಾರ್ಯಕ್ರಮಕ್ಕೆ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀಶ ಭಟ್ ಹಾಗೂ ಶ್ರೀನಿವಾಸ ಹೆಲ್ತ್ ಇನ್ಸ್ಟಿಟ್ಯೂಟ್ ಪ್ರಾಧ್ಯಾಪಕಿ ಆಶಾ ಮೆಡಮ್, ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕುಮಾರ ಧೀರಜ್ ಬೆಳ್ಳಾರೆ ಹಾಗೂ ವಿವೇಕಾನಂದ ಮತ್ತು ತ್ರಿಶಾ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ್ದರು. ಎರಡು ದಿನಗಳ ಕಾಲ ವಿಜ್ಞಾನ ಪ್ರಾಯೋಗಿಕ ಪ್ರದರ್ಶನ, ಜೀವನದ ಬುನಾದಿಗೆ ಅವಶ್ಯವಾದ ಮೌಲ್ಯವರ್ಧನೆ, ಶೈಕ್ಷಣಿಕ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸಂಭವಿಸಬಹುದಾದ ತೊಂದರೆ, ಅಡೆತಡೆಗಳನ್ನು ನಿವಾರಿಸಿಕೊಳ್ಳುವ ಉಪಾಯಗಳನ್ನು, ತಿಳಿಯಪಡಿಸಿದರು. ಪ್ರಾಧ್ಯಾಪಕಿ ಆಶಾ ಮಕ್ಕಳಲ್ಲಿರುವ ಮಾನಸಿಕ ತೊಂದರೆಗೆ ಆಪ್ತ ಸಮಾಲೋಚನೆಯ ಮೂಲಕ ಪರಿಹಾರವನ್ನು ತಿಳಿಸಿದರು. ಸಂಶೋಧನಾ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಮುಖೇನ ಮಕ್ಕಳಲ್ಲಿ ಜೀವನ ನಿರ್ವಹಣೆಯ ಕೌಶಲ್ಯದಾರಿಯನ್ನು ಪ್ರಸ್ತುತಪಡಿಸಿದರು. ಆಗಮಿಸಿದ ಅತಿಥಿ ಉಪನ್ಯಾಸಕರನ್ನು ಮತ್ತು ವಿದ್ಯಾರ್ಥಿಗಳನ್ನು ಶಿಕ್ಷಕಿ ಶ್ರೇಯಾ ಭಟ್ ಸ್ವಾಗತಿಸಿದರು. ಆಡಳಿತಾಧಿಕಾರಿ ಎನ್.ಎ.ಭಟ್ ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದರು. ವೀಣಾ ಬಾಂದೇಕರ್ ಮತ್ತು ಎ.ಬಿ.ಹೀರೇಮಠ್ ವಂದನಾರ್ಪಣೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳು, ಶಾಲಾ ಶಿಕ್ಷಕವರ್ಗ ಶಾಲಾ ವಸತಿ ವಿಭಾಗದ ಕೃಷ್ಣಮೂರ್ತಿ ರಾವ್, ಪ್ರಕಾಶ ಗೋಂಬಿಯವರು ಉಪಸ್ಥಿತರಿದ್ದರು.