ಕುಮಟಾ: ತಾಲೂಕಿನ ಮಿರ್ಜಾನಿನ ಬಿಜಿಸ್ ಕೇಂದ್ರೀಯ ವಿದ್ಯಾಲಯಕ್ಕೆ ಆಗಮಿಸಿದ ನಾಡಪ್ರಭು ಕೆಂಪೇಗೌಡರ ರಥಕ್ಕೆ ಶ್ರೀ ಆದಿಚುಂಚನಗಿರಿ ಮಿರ್ಜಾನ್ ಶಾಖಾಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಸ್ವಾಗತಿಸಿ, ರಥವನ್ನು ಪೂಜಿಸಿ, ಪವಿತ್ರ ಮೃತ್ತಿಕೆ ಮತ್ತು ಜಲವನ್ನು ನೀಡಿದರು.
ಈ ಸಂದರ್ಭದಲ್ಲಿ ಬಿಜಿಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಲೀನಾ ಎಂ. ಗೊನೆಹಳ್ಳಿ, ಶಿಕ್ಷಕ ವೃಂದ ಮತ್ತು ಶಾಲೆಯ ಸಮಸ್ತ ವಿದ್ಯಾರ್ಥಿಗಳು ರಥಕ್ಕೆ ಭವ್ಯ ಸ್ವಾಗತ ಕೋರಿದರು. ಕುಮಟಾ ತಾಲೂಕಿನ ಸಮಸ್ತ ಅಧಿಕಾರಿ ವೃಂದ, ತಾಲೂಕಾ ಗ್ರಾಮ ಒಕ್ಕಲು ಹಾಗೂ ಹಾಲಕ್ಕಿ ಒಕ್ಕಲು ಮುಖಂಡರು, ನಾಗರಿಕರು ಹಾಜರಿದ್ದು ರಥಕ್ಕೆ ಭವ್ಯ ಸ್ವಾಗತ ಕೋರಿದರು.
ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ನಾಡಗೌಡ ಕೆಂಪೇಗೌಡರ 108 ಅಡಿಯ ಭವ್ಯ ಕಂಚಿನ ಪ್ರತಿಮೆ ಮತ್ತು ಕೆಂಪೇಗೌಡರ ಥೀಮ್ ಪಾರ್ಕ್ ನಿರ್ಮಾಣಕ್ಕಾಗಿ ನಾಡಿನ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ ಮತ್ತು ಜಲವನ್ನು ರಥ ಯಾತ್ರೆಯ ಅಭಿಯಾನದ ಮೂಲಕ ಸಂಗ್ರಹಿಸಲಾಗುತ್ತಿರುವುದು ವಿಶೇಷ.