ಕುಮಟಾ: ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್, ಬಿ.ಕೆ. ಭಂಡಾರಕರ್ಸ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳು ಕರ್ನಾಟಕದ ನಕಾಶೆಯನ್ನು ಬಿಡಿಸಿ ಸುತ್ತಲೂ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯನ್ನು ಪ್ರತಿನಿಧಿಸುವ ರೀತಿಯಲ್ಲಿ 31 ದೀಪಗಳನ್ನು ಬೆಳಗಿಸಿದರು ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ, ಸುಜಾತಾ ಹೆಗಡೆ ತಾಯಿ ಭುವನೇಶ್ವರಿ ದೇವಿಯ ಪೂಜೆಯನ್ನು ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಉಪನ್ಯಾಸಕ ಚಿದಾನಂದ ಭಂಡಾರಿಯವರು ಮಾತನಾಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕನ್ನಡದ ಪಾತ್ರವನ್ನು ವಿವರಿಸಿದರು, ಹಾಗೆ ಆಂಗ್ಲ ಭಾಷೆಯ ಆಕ್ರಮಣದಿಂದಾಗಿ ಕನ್ನಡದ ಪದಗಳ ಬಳಕೆ ಕಡಿಮೆ ಆಗುತ್ತಿರುವುದಕ್ಕೆ ವಿಷಾದವನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಕುಮಾರಿ ಮಧುರಾ, ಕನ್ನಡಕ್ಕೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕೊಡುಗೆಗಳೇನು ಎಂಬುದನ್ನೂ ಅತ್ಯಂತ ಸುಂದರವಾಗಿ ತಿಳಿಸಿದಳು. ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಕನ್ನಡ ಹಿರಿಮೆಯನ್ನು ಹೆಚ್ಚಿಸುವ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳಿಗಾಗಿ ಕನ್ನಡ ಮತ್ತು ಕರ್ನಾಟಕದ ಬಗೆಗಿನ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಗಾಯತ್ರಿ ಕಾಮತ ಇವರು ತಾವು ರಚಿಸಿದ ಕನ್ನಡದ ಚುಟುಕು ಕವನಗಳನ್ನು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಕಿರಣ ಭಟ್ ಇವರು ವಿದ್ಯಾರ್ಥಿಗಳು ಎಲ್ಲಾ ಭಾಷೆಗಳನ್ನು ಕಲಿಯಬೇಕು ಮತ್ತು ಗೌರವಿಸಬೇಕು ಹಾಗೆ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂಬುದನ್ನು ತಿಳಿಸಿದರು.
ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಿ ಪೂರ್ವ ಸ್ವಾಗತಿಸಿದಳು ಮತ್ತು ಕುಮಾರಿ ಶ್ರೀಜನಿ ವಂದಿಸಿದಳು. ಕುಮಾರಿ ಶುಭಾ ಕಾರ್ಯಕ್ರಮವನ್ನು ನಿರೂಪಿಸಿದಳು.