• Slide
  Slide
  Slide
  previous arrow
  next arrow
 • ಹೋರಾಟ ಮನೋಭಾವದ ಅರ್ಜುನ, ಮಾರ್ಗದರ್ಶನ ಮಾಡುವ ಕೃಷ್ಣ ಇದ್ದಲ್ಲಿ ವಿಜಯ ನಿಶ್ಚಿತ: ರಘುನಂದನಜೀ

  300x250 AD

  ಶಿರಸಿ: ಹೋರಾಟ ಮನೋಭಾವದ ಅರ್ಜುನ, ಮಾರ್ಗದರ್ಶನ ಮಾಡುವ ಕೃಷ್ಣ ಇದ್ದಲ್ಲಿ ವಿಜಯ ನಿಸ್ಸಂಶಯವಾಗಿ ದೊರಕುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಚಾರಿಕ ವೇದಿಕೆ ಪ್ರಜ್ಞಾಪ್ರವಾಹದ ದಕ್ಷಿಣ ಮಧ್ಯಕ್ಷೇತ್ರೀಯ ಸಂಯೋಜಕ ರಘುನಂದನ ಹೇಳಿದರು.

  ಅವರು ನಗರದಲ್ಲಿ ವಿಜಯ ದಶಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಪಥಸಂಚಲನದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ ಭಾರತದಲ್ಲಿ ಹಬ್ಬಗಳೇ ಪ್ರಮುಖವಾಗಿವೆ. ಸಮೃದ್ಧಿ, ಸಂತೃಪ್ತಿ, ಸಂಸ್ಕೃತಿ ಇದ್ದರೆ ಮಾತ್ರ ಹಬ್ಬದ ಆಚರಣೆ ಸಾಧ್ಯ. ಪರಿವಾರ ಜೊತೆಗೂಡಿ ಹಬ್ಬ ಆಚರಿಸುವ ಮೂಲಕ ನಮ್ಮ ನಂಬಿಕೆಗಳು ಗಟ್ಟಿಯಾಗಿವೆ.

  ಆಧ್ಯಾತ್ಮ ಭಾರತದ ಜೀವನದ ಮೂಲವಾಗಿದೆ. ನನ್ನನ್ನು ತಿಳಿದುಕೊಳ್ಳುವುದು ಆಧ್ಯಾತ್ಮ. ಇನ್ನೊಬ್ಬರ ಪರವಾಗಿ ನೋಡುವುದು ಧರ್ಮ. ನಮ್ಮ ದೇಶದಲ್ಲಿ ನವರಾತ್ರಿಯಲ್ಲಿ ಚಿತ್ತಶುದ್ಧಿಗಾಗಿ ಉಪವಾಸ ಮಾಡುವುದು ರೂಢಿಯಲ್ಲಿದೆ ಎಂದರು.

  ಸಿಮಿ, ಪಿಎಫ್ಐನಂತಹ ರಕ್ತಬೀಜಾಸುರರು ಇಂದು ಹಲವೆಡೆ ಕಾಣಬಹುದು. ನಮ್ಮೆದುರು ಅನೇಕ ರೀತಿಯ ಶತ್ರುಗಳನ್ನು ಕಾಣುತ್ತೇವೆ. ಅಂತಹ ಎಲ್ಲ ರಾಕ್ಷಸತ್ವ ಗುಣವನ್ನು ಎದುರಿಸುವ ಪ್ರವೃತ್ತಿ ನಮ್ಮದಾಗಬೇಕು.

  300x250 AD

  ಪೂರ್ಚುಗೀಸರು, ಬ್ರಿಟಿಷರು ನಮ್ಮ ಮೇಲೆಸಗಿದ ಅತ್ಯಾಚಾರಗಳನ್ನು ಮರೆತಿದ್ದೇವೆ. ಸತತ ಸಂಘರ್ಷದ ಪರಿಣಾಮ ಇಂದು ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿದ್ದೇವೆ. ನಮ್ಮಲ್ಲಿರುವ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ವ್ಯಕ್ತಿ ನಿರ್ಮಾಣ ಅನಿವಾರ್ಯ. ಆ ಹಿನ್ನಲೆಯಲ್ಲಿ ಡಾಕ್ಟರ್ ಜೀಯವರ ನೇತೃತ್ವದಲ್ಲಿ 1925ರ ವಿಜಯ ದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಯಿತು.  ಸಂಘದ ತಪಸ್ಸಿನ ಪರಿಣಾಮ ಭಾರತದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯವಾಗಿದೆ ಎಂದು ಹೇಳಿದರು.

  ಸಂಘದ ಪ್ರಾಣ ಸ್ವಯಂಸೇವಕರಲ್ಲಿದೆ. ಹಿಂದೂ ಸಮಾಜದ ಅರ್ಚನೆ ಸಂಘದ ಕಾರ್ಯವಾಗಿದೆ. ಎದುರಿನವರು ಕೇಳಿದ ಭಾಷೆಯಲ್ಲಿಯೇ ನೀಡುವ ಸಾಮರ್ಥ್ಯವನ್ನು ಹಿಂದೂ ಸಮಾಜಕ್ಕಿದೆ. ಸಜ್ಜನರ ಸಂರಕ್ಷಣೆಗೆ ಅವಶ್ಯವಿರುವ ಕ್ಷಾತ್ರಶಕ್ತಿ ನಮ್ಮ ಸಮಾಜದಲ್ಲಿದೆ. ನಮ್ಮ ಮಾನಬಿಂದುಗಳ ರಕ್ಷಣೆಗೆ ಹಿಂದು ಸಮಾಜ ಎದ್ದುನಿಲ್ಲಬೇಕು. ಅದಕ್ಕೆ ಪರ್ಯಾಯವಿಲ್ಲ. ಹಿಂದುಗಳ ಆಚರಣೆ, ಸಂಸ್ಕೃತಿ ಜಗತ್ತಿನ ಗಮನ ಸೆಳೆಯುತ್ತಿದೆ ಎಂದರು.

  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಭಾರತೀಯ ಸೈನ್ಯದ ನಿವೃತ್ತ ಸೈನಿಕ ರಾಮು ಸುಬೇದಾರ್, ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆಗೊಳಿಸುವಲ್ಲಿ ಸಂಘದ ಎರಡನೇ ಸರಸಂಘಚಾಲಕ ಎಂ.ಎಸ್. ಗೊಳ್ವಲ್ಕರ್ ಮತ್ತು ಭಾರತೀಯ ಸೈನ್ಯದ ಅಧಿಕಾರಿಗಳ ಪಾತ್ರ ಶ್ಲಾಘನೀಯ ಎಂದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗಣವೇಶಧಾರಿ ಸ್ವಯಂಸೇವಕರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿರಸಿ ನಗರ ಕಾರ್ಯವಾಹ ಮಹೇಶ ಹಂಚಿನಕೇರಿ ಸ್ವಾಗತಿಸಿದರು. ನಗರ ಸಂಪರ್ಕ ಪ್ರಮುಖ ಮಂಜುನಾಥ ಎಸಳೆ ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top