ಶಿವಮೊಗ್ಗ: ಟೊಮ್ಯಾಟೋ ಬಳಸಿ ಸೊಳ್ಳೆ ಓಡಿಸುವ ಉತ್ಪನ್ನವೊಂದು ಸಿದ್ಧವಾಗಿದೆ. ಮಲೆನಾಡಿನ ಯುವ ಸಂಶೋಧಕರು ಇತ್ತೀಚಿನ ದಿನಗಳಲ್ಲಿ ರಾಸಾಯಿಕ ರಹಿತ ಸೊಳ್ಳೆ ಓಡಿಸುವ ಉತ್ಪನ್ನವನ್ನು ಸಂಶೋಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈಗ ಟೊಮ್ಯಾಟೋ ರಸ ಬಳಸಿ ತಯಾರಿಸಿದ ರಾಸಾಯನಿಕ ರಹಿತ ಸೊಳ್ಳೆ ನಿಗ್ರಹ ಉತ್ಪನ್ನ ಹೊರಬಂದಿದೆ. ಅಡಿಕೆ ಚಹಾ ಸಂಶೋಧಿಸಿ ಮಾರುಕಟ್ಟೆ ಕಂಡುಕೊಳ್ಳುವಲ್ಲಿ ಯಶಸ್ವಿ ಆಗಿರುವ ಸಮೀಪದ ಮಂಡಗದ್ದೆಯ ನಿವೇದನ್ ನೆಂಪೆ ಅವರೇ ಟೊಮ್ಯಾಟೋ ಬಳಸಿ ಸೊಳ್ಳೆ ನಿರೋಧಕ ಉತ್ಪನ್ನ ತಯಾರಿಸಿದ್ದಾರೆ.
ಟೊಮ್ಯಾಟೋದಲ್ಲಿನ ಈ ಅಂಶವೇ ಕಾರಣ. ಟೊಮ್ಯಾಟೋದಲ್ಲಿನ ರಾಸಾಯನಿಕ ಅಂಶವೊಂದು ಸೊಳ್ಳೆಗಳಿಗೆ ವಿರೋಯಾಗಿ ಕೆಲಸ ಮಾಡುತ್ತದೆ. ಟೊಮ್ಯಾಟೋದಲ್ಲಿ ಐಬಿಐ-246 ಎಂಬ ಅಂಶವೊಂದು ಇದೆ. ಇದು ಸೊಳ್ಳೆಗಳ ವಿರುದ್ಧ ಪರಿಣಾಮಕಾರಿ ಕೆಲಸ ಮಾಡುತ್ತದೆ. ಇದರ ಮಾಹಿತಿ ಪಡೆದ ನಿವೇದನ್ ಸೊಳ್ಳೆಗಳ ವಿರುದ್ಧ ಉತ್ಪನ್ನ ತಯಾರಿಸುವ ಪ್ರಯೋಗ ಯಾಕೆ ಮಾಡಬಾರದು ಎಂದು ಕಾರ್ಯ ಆರಂಬಿಸಿದರು. ಒಂದು ವರ್ಷದ ಹಿಂದೆ ಸಂಶೋದನೆ ಆರಂಭಿಸಿ, ಉತ್ಪನ್ನವನ್ನೂ ಪ್ರಾಯೋಗಿಕವಾಗಿ ತಯಾರಿಸಲು ಶುರು ಮಾಡಿದರು. ಅದೀಗ ಯಶಸ್ವಿ ಆಗಿದೆ. ಕೇವಲ ಟೊಮ್ಯಾಟೋ ಹಣ್ಣು ಮಾತ್ರವಲ್ಲದೇ ಅದರ ಗಿಡಗಳನ್ನು ಸಹ ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.
ಕೇವಲ 10 ರೂ.ಗೆ ಉತ್ಪನ್ನ: ಕಡಿಮೆ ದರದಲ್ಲಿ ಉತ್ಪನ್ನ ಗ್ರಾಹಕರ ಕೈಗೆ ದೊರೆಯುವಂತೆ ಮಾಡಲು ನಿವೇದನ್ ನೆಂಪೆ ಪ್ರಯತ್ನ ಮಾಡಿದ್ದಾರೆ. ಕೇವಲ 10 ರೂ.ಗೆ ಒಂದು ಪ್ಯಾಕೆಟ್ ಸೊಳ್ಳೆ ನಿರೋಧಕ ಉತ್ಪನ್ನ ದೊರೆಯುವಂತೆ ಮಾಡಿದ್ದಾರೆ.