ಯಲ್ಲಾಪುರ: ತಾಲೂಕಿನ ಕಂಚನಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ನಾಯಕ ಇವರನ್ನು 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಾಜ್ಯ ಮಟ್ಟದ ಒಟ್ಟು 20 ಶಿಕ್ಷಕರಿಗೆ ಪ್ರಶಸ್ತಿ ನೀಡಿದ್ದು, ಅದರಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಯಲ್ಲಾಪುರ ಕಂಚನಳ್ಳಿ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ಗಣಪತಿ ನಾಯಕ ಅವರು ಕೂಡ ಒಬ್ಬರು, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ತಲಾ 10,000 ರೂ. ನಗದು, ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಸೆ.5 ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಪುರಸ್ಕರಿಸಲಾಗಿದೆ.
ಕಂಚನಳ್ಳಿ ಶಾಲೆಯ ಮುಖ್ಯಾಧ್ಯಾಪಕರಾದ ಸುಧಾಕರ ನಾಯಕರವರು ಶಿಕ್ಷಕರಾಗಿ 30 ವರ್ಷ ಸೇವೆ ಸಲ್ಲಿಸಿದ್ದು, ಟಿ.ಸಿ.ಎಚ್. ಬಿ.ಎ., ಬಿಎಡ್, ಎಮ್.ಎ, ಎಮ್.ಎಡ್ ಪದವಿಯನ್ನು ಪಡೆದಿದ್ದಾರೆ. ಶಾಲಾ ಮಕ್ಕಳಿಗೆ ಕಥೆ, ಕವನ, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಲು, ಹಕ್ಕಿಪುಕ್ಕ ಪರಿಸರ ಮಕ್ಕಳ ಪುಸ್ತಕವನ್ನು ಮುದ್ರಣ ಮಾಡಿದ್ದಾರೆ. ಶಾಲೆಗಲ್ಲಿ ಮಕ್ಕಳ ಕೆಲಸ ಸುಲಭಗೊಳಿಸಲು ಪಿಪಿಟಿ, ಐಸಿಟಿ ಯೂಟ್ಯೂಬ್ ಬಳಕೆ ಮೂಲಕ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು. ರಾಜ್ಯ ಮಟ್ಟದ ಇನ್ಸಪೈರ್ ಅವಾರ್ಡ್ ಪಡೆಯಲು ಎರಡು ವಿದ್ಯಾರ್ಥಿಗಳಿಗೆ ಆಯ್ಕೆ ಆಗಲು ಮಾರ್ಗದರ್ಶನ ನೀಡಿದ್ದು, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯಲು ತರಬೇತಿಗೆ ಸಹಕರಿಸಿರುವುದು, ಹೀಗೆ ಹತ್ತು ಹಲವಾರು ಶೈಕಣಿಕ ಪ್ರಗತಿಗಳನ್ನು ಗಮನಿಸಿದ ಶಿಕ್ಷಣ ಇಲಾಖೆ ಸುಧಾಕರ ನಾಯಕ ಇವರಿಗೆ ಪ್ರಶಸ್ತಿಗೆ ನೀಡಿ ಗೌರವಿಸಲಾಗಿದೆ.