ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮವಾದ ಶಿರ್ವೆ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಒಂದು ಟವರ್ ನಿರ್ಮಿಸಿಕೊಡುವಂತೆ ಮಂಗಳವಾರದಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಶಿರ್ವೆ ಗ್ರಾಮದಲ್ಲಿ ಅತಿ ಹೆಚ್ಚು ಕೃಷಿ ಕುಟುಂಬಗಳಿವೆ. ಶಿರ್ವೆ ಗ್ರಾಮವು ಪ್ರವಾಸಿಗಳ ನೆಚ್ಚಿನ ತಾಣ ಸಹ ಆಗಿದೆ. ಈ ಗ್ರಾಮದ ಪ್ರಮುಖ ಸಮಸ್ಯೆ ಎಂದರೆ ನೆಟ್ವರ್ಕ್ ಸಂಪರ್ಕ ಇಲ್ಲದೆ ಇರುವುದು. ಸಮೀಪದ ದೇವಳಮಕ್ಕಿ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಟವರ್ ಇದ್ದರೂ ಸಹ ಶಿರ್ವೆ ಗ್ರಾಮದಲ್ಲಿ ನೆಟ್ವರ್ಕ್ ಸಂಪರ್ಕ ಸಿಗುವುದಿಲ್ಲ. ಇಲ್ಲಿನ ಗ್ರಾಮಸ್ಥರಿಗೆ ತುರ್ತು ಸಮಸ್ಯೆಯಾದರೆ ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಸಂಸ್ಥೆಗಳಿಂದ ಸಿಗುವ ಉಪಯುಕ್ತ ಮಾಹಿತಿಗಳು ಸರಿಯಾದ ಸಮಯಕ್ಕೆ ತಲುಪುವುದಿಲ್ಲ. ಆರೋಗ್ಯದಲ್ಲಿ ಏರುಪೇರು ಉಂಟಾದಾಗ ತುರ್ತು ಕರೆ ಮಾಡಲು ಗ್ರಾಮಸ್ಥರು ಬೆಟ್ಟಗುಡ್ಡ ಹತ್ತುವ ಸಂದರ್ಭ ಅನಿವಾರ್ಯವಾಗಿದೆ. ಇದರಿಂದ ಅವರಿಗೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಶಿರ್ವೆ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಅಥವಾ ಬೇರೆ ಯಾವುದೇ ಖಾಸಗಿ ನೆಟ್ವರ್ಕ್ ಟವರ್ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ದೇವಳಮಕ್ಕಿ ಗ್ರಾಮದ ಯುವ ಮುಖಂಡ ಪ್ರಜ್ವಲ್ ಶೇಟ್, ಗ್ರಾಮಸ್ಥರಾದ ಸಂತೋಷ್ ಗುನಗಾ, ರಾಮಕೃಷ್ಣ ಗೌಡ, ಥಾಕು ಗೌಡ, ರಾಮಾ ಜಿ.ಗೌಡ, ಬಾಳಾ ಗೌಡ, ಮಿನಾಕರ ಗೌಡ, ಸತೀಶ ಗಾಂವಕಾರ, ರಾಮಾ ಎಸ್.ಗೌಡ, ಸಂತೋಷ ಗೌಡ, ಘನಶ್ಯಾಮ ಗೌಡ ಮತ್ತಿತರರು ಹಾಜರಿದ್ದರು.