ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಶೇವಾಳಿಯ ವಿಭಾಕರ ದೇಸಾಯಿ ಕುಟುಂಬದವರು ಸತತ 80 ವರ್ಷಗಳಿಂದ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ಸಾರ್ವಜನಿಕ ಸೇವೆ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ.
ವಿಭಾಕರ ದೇಸಾಯಿ ಮತ್ತು ಗೋಪಾಲ ದೇಸಾಯಿ ಅಣ್ಣ- ತಮ್ಮಂದಿರು ಕಳೆದ 50 ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ಮಾಡುತ್ತಿದ್ದು, ಇವರ ತಂದೆಯವರ ಕಾಲದಿಂದಲೂ, ಅಂದರೆ ಸರಿಸುಮಾರು 80 ವರ್ಷಗಳಿಂದ ಸಾರ್ವಜನಿಕರಿಗೆ ಗಣಪತಿ ಮೂರ್ತಿಗಳನ್ನು ನೀಡುತ್ತಿದ್ದಾರೆ. ಸಾರ್ವಜನಿಕರು ದೇಣಿಗೆಯಾಗಿ ಕೊಟ್ಟ ಹಣವನ್ನು ಸ್ವೀಕರಿಸಿ ಯಾವುದೇ ಫಲಾಪೇಕ್ಷೆ ಇಲ್ಲದೇ ಗಣಪತಿ ಮೂರ್ತಿ ತಯಾರಿಸುತ್ತಿದ್ದಾರೆ.
ವರ್ಷವೂ ಸುಮಾರು 20ಕ್ಕೂ ಹೆಚ್ಚಿನ ಗಣಪತಿ ಮೂರ್ತಿ ಮಾಡಲಾಗುತ್ತಿದ್ದು, ಸದ್ಯ ಊರಿನಲ್ಲಿ ಮಾತ್ರ ಗಣಪತಿಯನ್ನು ನೀಡುತ್ತಿದ್ದಾರೆ. ಗಣಪತಿ ಮೂರ್ತಿಯ ಜೊತೆಗೆ ಗೌರಿ ಮೂರ್ತಿಯನ್ನು ಸಹ ಇವರು ಮಾಡುತ್ತಾರೆ. ತಮ್ಮದೇ ಗದ್ದೆಯಲ್ಲಿ ಸಿಗುವ ಮಣ್ಣಿನಿಂದ ನಿಸರ್ಗದತ್ತವಾದ ಗಣಪತಿ ಮಾಡುತ್ತಾರೆ. ಹಣದ ಆಸೆಗಾಗಿ ಗಣಪತಿ ಮಾಡದೆ, ವರ್ಷವೂ ದೇವರ ಸೇವೆಯ ರೂಪದಲ್ಲಿ ಮೂರ್ತಿಗಳನ್ನ ತಯಾರಿಸುತ್ತಿದ್ದಾರೆ.
ಕೋಟ್…
ನಮ್ಮ ತಂದೆಯವರು ನಮಗೆ ಕಲಿಸಿದ ವಿದ್ಯೆ ಇದು. ಪಾರಂಪರಿಕವಾಗಿ ನಾವು ಗಣಪತಿ ಮೂರ್ತಿಯನ್ನು ಮಾಡುತ್ತಾ ಬಂದಿದ್ದೇವೆ. ಎಷ್ಟು ವರ್ಷ ಸಾಧ್ಯವೋ ಅಷ್ಟು ವರ್ಷ ಸೇವೆ ಮಾಡುತ್ತೇನೆ.
• ವಿಭಾಕರ ದೇಸಾಯಿ, ಶೇವಾಳಿ