ಶಿರಸಿ: ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮದ ತಾರಗೋಡಿನ ಜೇನು ಕೃಷಿಕರಾದ ಮಧುಕೇಶ್ವರ ಹೆಗಡೆಯ ಜೇನುಕೃಷಿ ಕುರಿತಾಗಿ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.
ಭಾನುವಾರದ ಮನ್ ಕೀ ಬಾತ್ ನಲ್ಲಿ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕದಲ್ಲಿ ಮಧುಕೇಶ್ವರ ಎಂಬುವವರು ಸರಕಾರದ ಸಬ್ಸಿಡಿಯನ್ನು ಬಳಸಿಕೊಂಡು ಉತ್ತಮವಾಗಿ ಜೇನುಕೃಷಿಯನ್ನು ಮಾಡಿದ್ದಾರೆ. ಜೇನುಕುಂಟುಂಬ ನಿರ್ವಹಣೆ, ಜೇನಿನಿಂದ ಬೈ ಪ್ರಾಡಕ್ಟ್ ಮಾಡುವ ಮೂಲಕ ಮಧುಕೇಶ್ವರ ಎಂಬ ಅವರ ಹೆಸರಿಗೆ ಅನ್ವರ್ಥರಾಗಿದ್ದಾರೆ ಎಂದಿದ್ದಾರೆ.
ಈ ಕುರಿತು e – ಉತ್ತರ ಕನ್ನಡ ಜೊತೆಗೆ ಜೇನುಕೃಷಿಕ ಮಧುಕೇಶ್ವರ ಹೆಗಡೆ ಮಾತನಾಡಿ, ಇದು ನಿಜವಾಗಿಯೂ ಖುಷಿ ವಿಷಯ. ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ತನ್ನ ಸಣ್ಣ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವುದು ಸಂತಸದ ವಿಷಯ. ಇದು ನನ್ನ ಸುಯೋಗ ಮತ್ತು ಜೀವನದ ಮಹತ್ವ ಘಟನೆ ಎಂದಿದ್ದಾರೆ.
ಪ್ರಧಾನಿ ಮೋದಿ ಪ್ರಧಾನಿಯಾದ ಮೇಲೆ ಜೇನು ಕೃಷಿಗೂ ಸಹ ಸವಲತ್ತು ನೀಡಿದ್ದಾರೆ. ತಾನು ಕಳೆದ 35 ವರ್ಷಗಳಿಂದ ಜೇನು ಕೃಷಿ ಮಾಡುತ್ತಾ ಬಂದಿದ್ದು, ಜೇನು ಸಂಶೋಧನೆ, ಬೀ ಕ್ಯಾಲೆಂಡರ್, ಜೇನಿನಿಂದ ಬೈ ಪ್ರೊಡಕ್ಟ್ ಸಹ ತಯಾರಿಸಿದ್ದೇನೆ. ವಾರ್ಷಿಕವಾಗಿ 2 ಕೋಟಿಗೂ ವ್ಯವಹಾರ ಮಾಡುತ್ತಿದ್ದು, 1,500 ಜೇನು ಕುಟುಂಬ ಇರುವ ಪೆಟ್ಟಿಗೆಯನ್ನು ನಿರ್ವಹಿಸುತ್ತಿದ್ದೇನೆ. ಕೇವಲ 20,000 ಬಂಡವಾಳದಿಂದ ಇಂದು18 ಕೋಟಿ ಆಸ್ತಿ ಮಾಡಲು ಸಾಧ್ಯವಾಗಿದ್ದು ಕೇವಲ ಜೇನುಕೃಷಿಯ ಕಾರಣದಿಂದ ಎಂದು ಅವರು ಹೇಳಿದ್ದಾರೆ.