ಜೊಯಿಡಾ: ತಾಲೂಕಿನ ಅಖೇತಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಮ ಪಂಚಾಯತಿ ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಕಾರಣ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದೆ ಎಂದು ಗ್ರಾ.ಪಂ. ಸದಸ್ಯರು ದೂರಿದ್ದಾರೆ.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವುದಿಲ್ಲ. ಬೆಳಿಗ್ಗೆ 11 ಗಂಟೆಯ ನಂತರ ಗ್ರಾ.ಪಂ. ಬಾಗಿಲು ತೆಗೆಯುತ್ತಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿಲ್ಲ. ಇಲ್ಲಿನ ಅಭಿವೃದ್ಧಿ ಅಧಿಕಾರಿಗಳು ತಿಂಗಳಿಗೆ ನಾಲ್ಕೈದು ಬಾರಿಯಷ್ಟೇ ಗ್ರಾಮ ಪಂಚಾಯತಿಗೆ ಬರುತ್ತಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ತಿಳಿಸಿದರೂ ಕ್ರಮವಾಗಿಲ್ಲ ಎಂದೂ ಅಖೇತಿ ಗ್ರಾಮ ಪಂಚಾಯತಿ ಸದಸ್ಯರಾದ ಗುರಪ್ಪ ಹಣಬರ, ದೀಪಕ ದೇಸಾಯಿ, ಲಕ್ಷ್ಮಣ ದೇಸಾಯಿ, ಮಹಾದೇವ ಗಾವಡಾ, ನಂದಾ ಪವಾರ, ಮಂಜುಳಾ ದೂರಿದ್ದಾರೆ.