• Slide
    Slide
    Slide
    previous arrow
    next arrow
  • ಸಾಮಾಜಿಕ ಜಾಲತಾಣಗಳಿಗಿಂತ ಪತ್ರಿಕಾ ಮಾಧ್ಯಮ ಮಾತ್ರ ವಿಶ್ವಾಸಾರ್ಹ: ದಿನಕರ ಶೆಟ್ಟಿ

    300x250 AD

    ಕುಮಟಾ:ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದಿಂದ ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.

    ನಂತರ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಿಗಿಂತ ಪತ್ರಿಕಾ ಮಾಧ್ಯಮ ಮಾತ್ರ ವಿಶ್ವಾಸಾರ್ಹವಾಗಿದ್ದು, ವಸ್ತುನಿಷ್ಠ ವರದಿಗಳನ್ನು ಮಾಡುವ ಪತ್ರಕರ್ತರ ಜವಾಬ್ದಾರಿ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

    ಎಸಿಎಫ್ ಜಿ.ಕೆ.ಶೇಟ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಮತ್ತು ಕುಮಟಾ ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾ ರಂಗವಾಗಿದೆ. ಸರ್ಕಾರದ ತಪ್ಪನ್ನು ಎತ್ತಿಕಾಣಿಸುವ ಜೊತೆಗೆ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತದೆ. ನೊಂದವರ, ಶೋಷಿತ ವರ್ಗಗಳ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರ ಕಾರ್ಯ ನಿಜಕ್ಕೂ ಅಭಿನಂದನಾರ್ಹ. ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಯುವ ಸಮೂಹ ಪತ್ರಿನಿತ್ಯ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಕರೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಅನ್ಸಾರ್ ಶೇಖ್ ಮಾತನಾಡಿ, ಪತ್ರಕರ್ತರು ವಸ್ತುನಿಷ್ಠ ವರದಿ ಮಾಡಬೇಕೆಂದು ಎಲ್ಲರೂ ಮಾತಿನಲ್ಲಿ ಹೇಳುತ್ತಾರೆ. ಆದರೆ ವಸ್ತುನಿಷ್ಠ ವರದಿಗಳನ್ನು ಸಹಿದವರ ಪ್ರಮಾಣವೇ ಜಾಸ್ತಿ. ಪತ್ರಕರ್ತರಿಗೆ ಭದ್ರತೆಯಾಗಲಿ, ಸುರಕ್ಷತೆಯಾಗಲಿ ಇಲ್ಲ. ಆ ಬಗ್ಗೆ ಸರ್ಕಾರ ಕೂಡ ಗಮನಹರಿಸುತ್ತಿಲ್ಲ ಎಂದ ಅವರು, ಕುಮಟಾದಲ್ಲಿ ಪತ್ರಿಕಾ ಭವನ ನಿರ್ಮಿಸಲು ಶಾಸಕರು ಜಾಗ ಮಂಜೂರಿ ಮಾಡಿಕೊಡಬೇಕೆಂದು ಆಗ್ರಹಿಸಿದರು.

    ಕಾರ್ಯಕ್ರಮದ ಆರಂಭದಲ್ಲಿ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪತ್ರಕರ್ತ ಸದಾನಂದ ದೇಶಭಂಡಾರಿ ಸ್ವಾಗತಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಾರ್ಯದರ್ಶಿ ಚರಣರಾಜ್ ನಾಯ್ಕ ಪ್ರಾಸ್ತಾವಿಸಿದರು. ಕಾಲೇಜು ಉಪನ್ಯಾಸಕ ಎಸ್.ವಿ.ನಾಯ್ಕ ನಿರೂಪಿಸಿದರು. ಯೂನಿಯನ್ ಸದಸ್ಯ ಅಮರನಾಥ ಭಟ್ ವಂದಿಸಿದರು. ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಕಾಲೇಜು ಪ್ರಾಂಶುಪಾಲ ಸತೀಶ ಬಿ.ನಾಯ್ಕ, ಯೂನಿಯನ್ ಖಜಾಂಚಿ ರಾಘವೇಂದ್ರ ದಿವಾಕರ, ಪತ್ರಕರ್ತರಾದ ನಟರಾಜ್ ಗದ್ದೆಮನೆ, ಯೋಗೇಶ ಮಡಿವಾಳ ಸಹಕರಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರವೀಣ ಹೆಗಡೆ, ಹಿರಿಯ ಪತ್ರಕರ್ತರಾದ ಎಂ ಜಿ ನಾಯ್ಕ, ಸುಬ್ರಾಯ ಭಟ್, ಗಣೇಶ ರಾವ್, ನಾಗರಾಜ ಪಟಗಾರ, ಇತರೆ ಪತ್ರಕರ್ತರು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸದಸ್ಯರು ಉಪಸ್ಥಿತರಿದ್ದರು.

    300x250 AD

    ರಸಪ್ರಶ್ನೆ ಸ್ಪರ್ಧೆ: ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ ಪಿಯುಸಿ ವಿದ್ಯಾರ್ಥಿಗಳ ಕುಮಟಾ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಚಾಲನೆ ನೀಡಿದರು

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಮಾತನಾಡಿದರು. ಪುರಸಭೆ ಸದಸ್ಯರಾದ ಎಂ.ಟಿ.ನಾಯ್ಕ, ಪ್ರಮುಖರಾದ ಧಾಕ್ಷಾಯಿಣಿ ಅರಿಗ, ಸಂತೋಷ ನಾಯ್ಕ ಇದ್ದರು. ಕ್ವಿಜ್ ಮಾಸ್ಟರ್ ಜಗದೀಶ್ ಎಚ್.ನಾಯ್ಕ ನಿರ್ವಹಿಸಿದರು. ಉಪನ್ಯಾಸಕ ಆನಂದು ನಾಯ್ಕ, ಹಿರಿಯ ಉಪನ್ಯಾಸಕ ಆರ್.ಎಚ್.ನಾಯ್ಕ ಹಾಗೂ ಸಿಬ್ಬಂದಿ ಸಹಕರಿಸಿದರು.

    ಸ್ಪರ್ಧೆಯಲ್ಲಿ ಸರಸ್ವತಿ ಪಿಯು ಕಾಲೇಜಿನ ಸಾತ್ವಿಕ ಭಟ್ ಮತ್ತು ರಾಹುಲ್ ಶಾನಭಾಗ ತಂಡ ಪ್ರಥಮ ಬಹುಮಾನ ಪಡೆಯಿತು. ದ್ವಿತೀಯ ಬಹುಮಾನವನ್ನು ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ಸಹನಾ ಮಡಿವಾಳ ಹಾಗೂ ಅನನ್ಯ ಹಳದಿಪುರ ತಂಡ ಮತ್ತು ಸರಸ್ವತಿ ಪಿಯು ಕಾಲೇಜಿನ ಬಿ.ಎಂ.ಅನುಷಾ ಹಾಗೂ ಪ್ರಾಪ್ತಿ ನಾಯಕ ತಂಡ ಪಡೆಯಿತು. ತೃತೀಯ ಬಹುಮಾನವನ್ನು ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ಕಾರ್ತಿಕ ಮಾವಿನಕಟ್ಟೆ ಮತ್ತು ಪರಿಪೂರ್ಣ ಭಟ್ ತಂಡ ಪಡೆಯಿತು.

    ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನದ ಜೊತೆಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಸ್ಪರ್ಧೆಯಲ್ಲಿ ತಾಲೂಕಿನ ಆರು ಕಾಲೇಜಿನ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು 24 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸುವ ಮೂಲಕ ಪ್ರೋತ್ಸಾಹಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top