ಹೊನ್ನಾವರ: ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರಿಗೆ, ತಗ್ಗು ಪ್ರದೇಶಗಳ ಎಲ್ಲಾ ಮನೆಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಮತ್ತು ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಅವರ ನೇತೃತ್ವದಲ್ಲಿ ಗುರುವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಶಿವಾನಂದ ಹೆಗಡೆ, ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದ್ದು, ಇದರಿಂದಾಗಿ ಹಲವು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಪ್ರವಾಹದಿಂದಾಗಿ ತಗ್ಗು ಪ್ರದೇಶಗಳ ಮನೆಗಳ ಸುತ್ತಲೂ ನೀರು ತುಂಬಿ ಜಲಾವೃತವಾಗಿದೆ. ಕಸ ಕಡ್ಡಿಗಳು, ಮಣ್ಣು ಇವುಗಳೆಲ್ಲ ಮನೆಗಳ ಸುತ್ತಲೂ ಸಂಗ್ರಹಗೊಂಡು ಕೊಳೆತು ಬಿದ್ದಿರುವುದರಿಂದ ತೀವ್ರ ತೊಂದರೆ ಉಂಟಾಗಿದೆ. ಇದರಿಂದ ರೋಗ ರುಜಿನಗಳಿಗೆ ಕಾರಣವಾಗುತ್ತಿವೆ. ಹಲವು ಜನರಲ್ಲಿ ಆರೋಗ್ಯ ಸಮಸ್ಯೆ ತಲೆದೋರಿದೆ. ಕುಡಿಯುವ ನೀರಿನ ಬಾವಿಗಳಿಗೆ ಕೂಡ ಹೊಲಸು ನೀರು ತುಂಬಿರುವುದರಿಂದ ಬಾವಿ ಕಲುಷಿತಗೊಂಡು, ಕುಡಿಯುವ ನೀರಿಗೂ ಬಹಳಷ್ಟು ದೂರ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು.
ತೀವ್ರ ಮಳೆಯಿಂದಾಗಿ ಬಾವಿಗಳನ್ನು ಸ್ವಚ್ಛಗೊಳಿಸಲು ಕೂಡ ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೊಲಸು ದುರ್ವಾಸನೆಗಳಿಂದ ಮನೆಗಳಲ್ಲಿ ವಾಸ್ತವ್ಯ ಕೂಡ ಮಾಡಲು ತುಂಬಾ ಕಷ್ಟವಾಗಿದೆ. ತೋಟ– ಗದ್ದೆಗಳಿಗೆ ಹಾಕಿದ ಗೊಬ್ಬರ ಮಣ್ಣುಗಳು ಕೂಡ ಕೊಚ್ಚಿ ಹೋಗಿ ಅಪಾರ ನಷ್ಟ ಸಂಭವಿಸುತ್ತಿದೆ. ಮನೆಯ ಸುತ್ತಲೂ ನೀರು ತುಂಬುವುದರಿಂದ ಮನೆ ಕೂಡ ಜೀರ್ಣಾವಸ್ಥೆ ತಲುಪುತ್ತಿದೆ. ಅಲ್ಲದೆ ಹಲವು ದಿನಗಳ ಕಾಲ ಮನೆ ತೇವಾಂಶಗೊಂಡು ವಾಸಿಸಲು ಅನಾನುಕೂಲವಾಗುತ್ತಿದೆ. ಕುಡಿಯುವ ನೀರಲ್ಲದೇ, ಉಳಿದ ಬಳಕೆಗೂ ನೀರು ಸಿಗದಂತಾಗಿ, ಮಳೆಗಾಲದಲ್ಲಿ ತಗ್ಗು ಪ್ರದೇಶಗಳ ಕುಟುಂಬಗಳಿಗೆ ಜೀವನ ನಡೆಸುವುದು ತುಂಬ ಕಷ್ಟದಾಯಕವಾಗಿದೆ ಎಂದರು.
ಸರ್ಕಾರ ಮಾರ್ಗಸೂಚಿಯಲ್ಲಿ ನಿಗದಿ ಪಡಿಸಿದ ಕ್ರ.ಸಂ. 2ರ ಪ್ರವಾಹ, ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳು, ಬಟ್ಟೆ ಬರೆ ಹಾನಿ ಇದಕ್ಕೆ ನೀಡುವ 10 ಸಾವಿರ ರೂ. ಪರಿಹಾರ ನಿಗದಿ ಪಡಿಸಲಾಗಿದ್ದು, ಈ ಮಾರ್ಗಸೂಚಿಯನ್ನು ಬದಲಿಸಿ ಮಾನವೀಯ ನೆಲೆಯಲ್ಲಿ ಪ್ರವಾಹ ಸಂತ್ರಸ್ತ ತಗ್ಗು ಪ್ರದೇಶಗಳ ಎಲ್ಲಾ ಮನೆಗಳು, ಕುಟುಂಬಗಳಿಗೆ ಕನಿಷ್ಟ 20 ಸಾವಿರ ರೂ. ತುರ್ತು ಪರಿಹಾರ ನೀಡಬೇಕು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್.ಸುಬ್ರಹ್ಮಣ್ಯ, ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಮಹೇಶ, ಸದಸ್ಯರಾದ ವಿನೋದ ನಾಯ್ಕ, ಹರಿಶ್ಚಂದ್ರ ನಾಯ್ಕ, ಕಮಾಲಕರ ಮುಕ್ರಿ, ನವೀನ ನಾಯ್ಕ, ಯುವ ಘಟಕದ ಅಧ್ಯಕ್ಷ ಸಂದೇಶ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹುಲಿಯಣ್ಣ ಗೌಡ, ರವಿ ಶೆಟ್ಟಿ ಕವಲಕ್ಕಿ, ಲಂಬೋದರ ನಾಯ್ಕ, ಶ್ರೀಕಾಂತ ನಾಯ್ಕ, ರಾಮಚಂದ್ರ ನಾಯ್ಕ, ಮಾಬ್ಲೇಶ್ವರ ಮೇಸ್ತ, ರಾಜೇಶ ಗುನಗಾ, ಗಜಾನನ ನಾಯ್ಕ, ನಾಗೇಶ ನಾಯ್ಕ, ಕಾಂಗ್ರೆಸ್ ಕಾರ್ಯಕರ್ತರು, ಕಿಸಾನ್ ಕಾಂಗ್ರೆಸ್ ಸದಸ್ಯರು ಹಾಜರಿದ್ದರು. ಗ್ರೇಡ್ 2 ತಹಶಿಲ್ದಾರ್ ಉಷಾ ಪಾವಸ್ಕರ್ ಮನವಿ ಸ್ವೀಕರಿಸಿದರು.
ಕೋಟ್…
ನಿರಂತರ ಮಳೆಯಿಂದ ಅಡಿಕೆ, ಭತ್ತ ಮುಂತಾದ ಬೆಳೆಗಳು ತೀವ್ರ ಹಾನಿಗೊಂಡಿದ್ದು ರೈತರಿಗೆ ಅಪಾರ ನಷ್ಟವಾಗಿದೆ. ನೀರು ನಿಂತು ಅಡಿಕೆ ತೋಟಗಳಲ್ಲಿ ಕೊಳೆ ರೋಗ ವ್ಯಾಪಕವಾಗಿ ಹಬ್ಬಿದೆ. ತುರ್ತು ಸಮೀಕ್ಷೆ ನಡೆಸಿ ಬೆಳೆವಿಮೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ಇರದ ರೈತರಿಗೆ ವಿಶೇಷ ಪರಿಹಾರ ನೀಡಬೇಕು ಮತ್ತು ಸರ್ಕಾರ ಮಧ್ಯ ಪ್ರವೇಶಿಸಿ ಹಾನಿಗೊಳಗಾದ ರೈತರಿಗೆ ತುರ್ತು ಪರಿಹಾರ ಒದಗಿಸಬೇಕು.
· ಶಿವಾನಂದ ಹೆಗಡೆ ಕಡತೋಕಾ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ