ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಗೆ ಢಿಕ್ಕಿಯಾದ ಪರಿಣಾಮ ಕಾರಿನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಬೆಳಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮೃತರನ್ನು ಜೋಸೆಫ್ ಕುಟ್ಟಿ (46) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇವರ ಪುತ್ರಿ ಅನು ಮರಿಯಾ (16) ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಜೋಸೆಫ್ ಮಗಳ ನೀಟ್ ಪರೀಕ್ಷೆಗೋಸ್ಕರ ಮಂಗಳೂರಿಗೆ ಹೋಗಿ ವಾಪಾಸಾಗುತ್ತಿದ್ದಾಗ ಭಾರೀ ಮಳೆಯಿಂದ ಬೆಳಕೆ ಸೇತುವೆಯಲ್ಲಿ ನಿಯಂತ್ರಣ ತಪ್ಪಿ ಕಾರು ಸೇತುವೆಗೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಜೋಸೆಫ್ ಎಡಗೆನ್ನೆಗೆ ತೀವ್ರವಾಗಿ ಪೆಟ್ಟು ತಗುಲಿದ್ದು ತಕ್ಷಣ ಸರಕಾರಿ ಆಸ್ಪತ್ರೆಗೆ ತರಲಾಯಿತಾದರೂ ಆಸ್ಪತ್ರೆಗೆ ಬರುವ ಮೊದಲೇ ಜೋಸೆಫ್ ಅಸು ನೀಗಿದ್ದರು. ಸುದ್ದಿ ತಿಳಿದ ತಕ್ಷಣ ನೂರಾರು ಜನರು ಆಸ್ಪತ್ರೆಯ ಆವರಣಕ್ಕೆ ಆಗಮಿಸಿದ್ದು ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರು ವಿದ್ಯುತ್ ಗುತ್ತಿಗೆದಾರರ ಕೆಲಸ ಮಾಡಿಕೊಂಡಿದ್ದು ಕಳೆದ ಹಲವಾರು ವರ್ಷಗಳಿಂದ ಭಟ್ಕಳದ ಜನರ ಪ್ರೀತಿ ಗಳಿಸಿದ್ದಲ್ಲದೇ ಎಲ್ಲರಲ್ಲಿಯೂ ಉತ್ತಮ ಬಾಂಧವ್ಯ ಹೊಂದಿ ಜನಾನುರಾಗಿಗಳಾಗಿದ್ದರು. ನೂರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು, ಈ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಬ್ ಇನ್ಸಪೆಕ್ಟರ್ ಭರತ್‌ಕುಮಾರ್ ವಿ. ತನಿಖೆ ನಡೆಸುತ್ತಿದ್ದಾರೆ.