ಯಲ್ಲಾಪುರ:ಗ್ರಾಹಕರ ಸಮಸ್ಯೆಯನ್ನು ಸ್ಥಳದಲ್ಲೇ ಸಾಧ್ಯವಾದಷ್ಟು ಪರಿಹರಿಸುವ ಉದ್ದೇಶದಿಂದ ನಾವು ಇಲ್ಲಿಗೆ ಬಂದಿರುತ್ತೇವೆ. ಇಲ್ಲಿ ಬಗೆಹರಿಸಲು ಆಗದ್ದನ್ನು ಆಫೀಸು ಮಟ್ಟದಲ್ಲಿ ಕುಳಿತು ಬಗೆಹರಿಸಲು ಪ್ರಯತ್ನಿಸುತ್ತೇವೆ. ಯಾವುದೇ ವಿದ್ಯುತ್ ಸಂಬಂಧಿ ಸಮಸ್ಯೆಯನ್ನು ನೀವು ನಿಸ್ಸಂಕೋಚವಾಗಿ ನಮ್ಮೆದುರು ಹೇಳಿಕೊಳ್ಳಿ ಎಂದು ಹುಬ್ಬಳ್ಳಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಅನಿಲ್ ಡಿಸೋಜ ಅವರು ಯಲ್ಲಾಪುರ ಉಪವಿಭಾಗ ಹೆಸ್ಕಾಂ, ಯಲ್ಲಾಪುರ ಮತ್ತು ಗ್ರಾಮಪಂಚಾಯತ ಉಮ್ಮಚ್ಗಿ ಇವರುಗಳ ಸಹಯೋಗದಲ್ಲಿ ಕನೇನಳ್ಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿದ್ಯುತ್ ಅದಾಲತ್ತಿನಲ್ಲಿ ಮಾತನಾಡುತ್ತ ಹೇಳಿದರು.
ತಿಂಗಳ ಪ್ರತಿ ಮೂರನೆ ಶನಿವಾರ ಸರಕಾರದ ಆದೇಶದಂತೆ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ನಾವು ಗ್ರಾಹಕರ ಬಳಿ ಹೋಗುತ್ತೇವೆ. ಅದರಂತೆ ಇಂದು ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಬಂದಿರುತ್ತೇವೆ ಎಂದೂ ಹೇಳಿದರು.
ಬಂದ ಅಧಿಕಾರಿಗಳ ಎದುರು ವಿದ್ಯುತ್ ಸಂಬಂಧೀ ಸಮಸ್ಯೆಗಳನ್ನು ಜನರು ಹೇಳಿಕೊಳಿಕೊಂಡರು. ಅವುಗಳಲ್ಲಿ ಪ್ರಮುಖವಾಗಿದ್ದು- ಬಂಡೀಮನೆ ಹತ್ತಿರವಿರುವ ಟಿ.ಸಿ. ಪಕ್ಕದ ಹಳ್ಳದ ದರೆ ಕುಸಿಯುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆ ಇದ್ದು,ಹಾಗಾಗುವ ಮೊದಲು ಟಿ.ಸಿ.ಸ್ಥಳಾಂತರಿಸುವ ಕುರಿತು. ಅದನ್ನು ಅಧಿಕಾರಿಗಳು ಮಾಡಿಸಿಕೊಡುವುದಾಗಿ ತಿಳಿಸಿದರು. ನಂತರ ಗಣಪತಿ ಟಿ.ಹೆಗಡೆಯವರ ಮನೆಯ ಹತ್ತಿರ ಇರುವ ವಿದ್ಯುತ್ ಕಂಬ ಮುರಿದು ಬೀಳುವ ಹಂತದಲ್ಲಿದ್ದು, ಕಳೆದ ವರ್ಷ ಬದಲಾಯಿಸುವಾಗ ಗುತ್ತಿಗೆದಾರನಿಗೆ ಲಂಚ ಕೊಡಲಿಲ್ಲವೆಂದು ಹಾಗೇ ಬಿಟ್ಟು ಹೋದ ಬಗ್ಗೆ ಪ್ರಸ್ತಾಪಿಸಲಾಯಿತು. ಅದನ್ನು ಕೂಡಲೆ ಸರಿಪಡಿಸಿ ಕೊಡುವುದಾಗಿ ಅಧಿಕಾರಿಗಳು ಬರವಸೆ ನೀಡಿದರು.
ಗ್ರಾಹಕರಿಂದ ಬಂದ ಒಟ್ಟೂ ಅರ್ಜಿಗಳ ಸಂಖ್ಯೆ ಹನ್ನೆರಡು. ಅವುಗಳಲ್ಲಿ ಹತ್ತಕ್ಕೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು. ವೇದಿಕೆಯಲ್ಲಿ ಸಿರ್ಸಿ ಕೆ.ಪಿ.ಟಿ.ಸಿ.ಎಲ್.ನ ವಸಂತ ಹೆಗಡೆ, ಕನೇನಳ್ಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಜಿ.ಜಿ.ಹೆಗಡೆ,ಉಮ್ಮಚ್ಗಿ ಗ್ರಾ.ಪಂ.ಸ್ಥಳೀಯ ಸದಸ್ಯ ಗ.ರಾ.ಭಟ್ಟ,ಕರೆಂಟ್ ಗುತ್ತಿಗೆದಾರ ಸತೀಶ್ ಹೆಗಡೆ,ಗಣಪತಿ ಹೆಗಡೆ ಮೊದಲಾದವರಿದ್ದರು. ಮಂಚೀಕೇರಿ ಸೆಕ್ಸೆನ್ ಆಫೀಸರ್ ಸುನೀಲ್ ಬಿ.ಕೆ. ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿ,ವಂದನಾರ್ಪಣೆ ಸಲ್ಲಿಸಿದರು.