• Slide
  Slide
  Slide
  previous arrow
  next arrow
 • ಸ್ವರ್ಣವಲ್ಲೀ ಶ್ರೀಗಳಿಗೆ ಆಯುರ್ವೇದ ಗ್ರಂಥದ ಪಾಠ ಮಾಡಿದ್ದರು ಡಾ.ಸಾಂಬಮೂರ್ತಿ ! ಅವರ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ !

  300x250 AD

  eUK ವಿಶೇಷ: ಮೂಲತಃ ಗೋಕರ್ಣದವರಾದ ಡಾ.ಸಾಂಬಮೂರ್ತಿ ಪ್ರಖ್ಯಾತ ಆಯುರ್ವೇದದ ಗುರು ಡಾ.ಗಣಪತಿ ಸೋಮಯಾಜಿ ಅವರ ಬಳಿ ಪಾರಂಪರಿಕ ವಿಧಾನದಲ್ಲಿ ಆಯುರ್ವೇದ ಶಾಸ್ತ್ರವನ್ನು ಅಧ್ಯಯನ ಮಾಡಿದವರು. ಆಯುರ್ವೇದದಲ್ಲಿ ಎಂ.ಡಿ. ಪದವಿ ಪಡೆದಿರುವ ಅವರು ಸಿದ್ಧಾಪುರದ ಧನ್ವಂತರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದಾರೆ. ನಂತರ ತಮ್ಮ ಪತ್ನಿ ಡಾ.ಸಾವಿತ್ರಿ ಅವರ ಜೊತೆ ಶಿರಸಿಯಲ್ಲಿ ಸಮೀಕ್ಷಾ ಆಯುರ್ವೇದ ಚಿಕಿತ್ಸಾಲಯವನ್ನು ಪ್ರಾರಂಭಿಸಿದರು.

  ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಆಯುರ್ವೇದ ಔಷಧಗಳ ತಯಾರಿಕೆ ಹಾಗೂ ವಿದ್ಯಾರ್ಥಿಗಳಿಗೆ ಅಧ್ಯಾಪನವನ್ನು ತಮ್ಮ ವೃತ್ತಿಯ ಜೊತೆ ನಿರಂತರವಾಗಿ ನಡೆಸುತ್ತ ಬಂದಿದ್ದಾರೆ. ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶಿಷ್ಯರೊಡನೆ ಪಾರಂಪರಿಕ ಕ್ರಮದಲ್ಲಿ ಆಯುರ್ವೇದದ ಮೂಲ ಗ್ರಂಥಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ ಹಾಗೂ ಅಷ್ಟಾಂಗಹೃದಯ ಗ್ರಂಥಗಳನ್ನು ಆವರ್ತನ ಮಾಡುವುದು ಸಾಂಬಮೂರ್ತಿ ದಂಪತಿಗಳ ಅಧ್ಯಾಪನ ಕ್ರಮದ ವೈಶಿಷ್ಟ್ಯ. ಸ್ವರ್ಣವಲ್ಲೀ ಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರಿಗೂ ಆಯುರ್ವೇದ ಗ್ರಂಥ-ತ್ರಯಗಳನ್ನು ಪಾಠ ಮಾಡಿರುವುದು ಉಲ್ಲೇಖಾರ್ಹ.

  ವ್ಯಕ್ತಿಗತವಾಗಿ ಆಯುರ್ವೇದ ಚಿಕಿತ್ಸೆ ನೀಡುವುದಕ್ಕಿಂತ ಮಿಗಿಲಾಗಿ ಆಯುರ್ವೇದವನ್ನೇ ಸಂಪೂರ್ಣವಾಗಿ ಅನುಷ್ಠಾನ ಮಾಡುವ ವೈದ್ಯರ ತಂಡದ ನಿರ್ಮಾಣಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಬೆಂಗಳೂರು ಮಹಾನಗರಕ್ಕೆ ತೆರಳಿ ಅಲ್ಲಿ ಆಯುರ್ವೇದ ಅಕಾಡೆಮಿಯ ಚಟುವಟಿಕೆಗಳನ್ನು ವಿಸ್ತರಿಸಿದರು. ಹಲವು ಕಮ್ಮಟಗಳನ್ನು, ವಿಚಾರ ಸಂಕಿರಣಗಳನ್ನು ಆಯೋಜಿಸಿದರು. ಅಂತಹ ಸಮಾವೇಶಗಳಲ್ಲಿ ಪ್ರಬಂಧಗಳನ್ನು ಮಂಡಿಸಿದರು. ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆದರು. ಉಪನ್ಯಾಸಗಳನ್ನು ನೀಡಿದರು. ಆಯುರ್ವೇದ ಕೃತಿಗಳನ್ನು ಪ್ರಕಟಿಸಿದರು. ಆಯುರ್ವೇದ ಕೇವಲ ಚಿಕಿತ್ಸಾ ಕ್ರಮವಲ್ಲ; ಇದು ಸಾತ್ತ್ವಿಕ ಜೀವನ ಪದ್ಧತಿ ಎನ್ನುವ ಸತ್ಯವನ್ನು ಪ್ರತಿಪಾದಿಸಿದರು.

  300x250 AD

  ಯೋಗ, ಪ್ರಾಣಾಯಾಮ, ಧ್ಯಾನ, ಮಂತ್ರೋಪಾಸನೆ, ಮುಂತಾದ ಆಧ್ಯಾತ್ಮಿಕ ಸಾಧನೆಗಳನ್ನು ನಿಯಮಿತವಾಗಿ ಅನುಷ್ಠಾನ ಮಾಡಿದರು. ಇಂತಹ ಜನಾನುರಾಗಿ ವೈದ್ಯರಾಗಿದ್ದ ಶ್ರೀಯುತರು ಆಕಸ್ಮಿಕವಾಗಿ ಬುದ್ಧ ಪೂರ್ಣಿಮೆಯ ಶುಭ ದಿನದಂದು ಮೇ.16, ಸೋಮವಾರ ಸಂಜೆ ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ನಿಧನರಾದರು. ಅವರಿಂದ ಚಿಕಿತ್ಸೆ ಪಡೆದ ಸಹಸ್ರಾರು ಜನರಿಗೆ ಇದು ಒಂದು ಆಘಾತಕಾರಿ ಸುದ್ದಿ. ಪ್ರಖ್ಯಾತ ಆಯುರ್ವೇದ ತಜ್ಞೆ, ಪತ್ನಿ ಡಾ.ಸಾವಿತ್ರಿ, ಪುತ್ರ ಸಂಯಮ ಹಾಗೂ ಪುತ್ರಿ ಸಂಜ್ಞಾ ಅವರನ್ನು ಶ್ರೀಯುತರು ಅಗಲಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top