ಶಿರಸಿ: ESAF ಫೌಂಡೇಶನ್ ಮತ್ತು ESAF ಸ್ಮಾಲ್ ಫೈನಾನ್ಸ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ನೀಡಲ್ಪಡುವ ‘Best Collective 2024’ ರಾಷ್ಟ್ರೀಯ ಪ್ರಶಸ್ತಿಯನ್ನು ತಾಲೂಕಿನ ಬಾಳೆಗದ್ದೆಯ ಪ್ರಗತಿಮಿತ್ರ ರೈತ ಉತ್ಪಾದಕ ಕಂಪನಿಗೆ ನೀಡಲಾಗಿದೆ.
ದೇಶಾದ್ಯಂತ ಸುಮಾರು 182 ಸಂಸ್ಥೆಗಳನ್ನು ಮೌಲ್ಯಮಾಪನ ಮಾಡಿ 3 ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಕೇರಳದ ತ್ರಿಶೂರ್‌ನಲ್ಲಿ ಪ್ರಶಸ್ತಿಯ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ESAF ಫೌಂಡೇಶನ್ ಮತ್ತು ಸ್ಮಾಲ್ ಫೈನಾನ್ಸ ಬ್ಯಾಂಕ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಮತ್ತು ಸಿ.ಇ.ಓ. ಪೌಲ್ ಥಾಮಸ್, ರಿಸರ್ವ ಬ್ಯಾಂಕಿನ ನಿರ್ದೇಶಕರಾದ ಸತೀಶ್ ಮರಾಠೆ ಹಾಗೂ ESAF ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಮರೀನಾ ಪೌಲ್ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಗತಿಮಿತ್ರದ ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ ಹೆಗಡೆ, ಬಾಳೆಗದ್ದೆ ಹಾಗೂ ಹಿರಿಯ ನಿರ್ದೇಶಕರಾದ ಕೇಶವ ಶಿವರಾಮ ಜೋಶಿ ಹುಣಸೆಹೊಂಡ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಗತಿಮಿತ್ರದ ರೈತಪರ ಕಾಳಜಿ, ಅಡಿಕೆ ಹಾಗೂ ಕಾಳು ಮೆಣಸಿನ ಕೊಯ್ಲೊತ್ತರ ನಿರ್ವಹಣೆ, ಮೌಲ್ಯವರ್ಧನೆ, ತೋಟ ನಿರ್ವಹಣೆಗೆ ಯಂತ್ರೋಪಕರಣಗಳ ಸೇವೆ, ಮಾರ್ಕೆಟಿಂಗ್, ಪರಿಕರಗಳ ವಿತರಣೆ, ಪಶುಸಂಗೋಪನಾ ಉತ್ಪಾದಕ ಸಂಸ್ಥೆಯ ಪ್ರವರ್ತನೆ ಹಾಗೂ ಕಂಪನಿಯ ಸಮಗ್ರ ಸಾಧನೆಗೆ ಈ ಪ್ರಶಸ್ತಿ ನೀಡಲಾಗಿದೆ.
ಪ್ರಗತಿಮಿತ್ರದ ಈ ಸಾಧನೆಗೆ ಕಂಪನಿಯ ಸದಸ್ಯರು, ಆಡಳಿತ ಮಂಡಳಿ, ಸಿಬ್ಬಂದಿಗಳು ಹಾಗೂ ಸಹಕಾರ ನೀಡಿದ ನಬಾರ್ಡ, ಮನುವಿಕಾಸ, ನಾಬ್‌ಕಿಸಾನ, ಬ್ಯಾಂಕ್ ಆಫ್ ಬರೋಡ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ವಿವೇಕ ಹೆಗಡೆ ಕೃತಜ್ಞತೆ ತಿಳಿಸಿದರು. ದೇಶದ ಒಂದು ಸಣ್ಣ ಹಳ್ಳಿ/ಪ್ರದೇಶದಲ್ಲಿ ನಡೆಯುತ್ತಿರುವ ರೈತಪರ ಕೆಲಸವನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿದಕ್ಕಾಗಿ ESAF ಫೌಂಡೇಶನ್ ಮತ್ತು ESAF ಸ್ಮಾಲ್ ಫೈನಾನ್ಸ ಬ್ಯಾಂಕ್‌ಗೆ ಈ ಮೂಲಕ ಕೃತಜ್ಞತೆ ತಿಳಿಸಿದರು.
ಒಂದೇ ವರ್ಷದಲ್ಲಿ “FPO Impact Award” ಮತ್ತು “Best Collective Award” ಗಳು ಪ್ರಗತಿಮಿತ್ರ ರೈತ ಉತ್ಪಾದಕ ಸಂಸ್ಥೆಗೆ ದೊರೆತಿರುವುದು ಸುದೈವ, ಈ ಪ್ರಶಸ್ತಿಗಳು ಸಂಸ್ಥೆಯ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಬದ್ಧತೆ ಮತ್ತು ಪರಿಶ್ರಮಕ್ಕೆ ಸಂದ ಗೌರವ ಎಂದು ಪ್ರತಿಪಾದಿಸಿದರು.