ಮೈಸೂರು: ಕಂಡು, ಕೇಳಿದ, ಅನುಭವಿಸಿದ ಜೀವನದ ಅನುಭವವನ್ನು ಸಾಹಿತ್ಯಕ್ಕೆ ರೂಪಾಂತರಗೊಳಿಸುವಾಗ ರಚನಕಾರರಿಗೆ ಆಗುವ ಸಂತೋಷ ಅವರ್ಣನೀಯ ಎಂದು ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.
ಅವರು ಮೈಸೂರಿನ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಯತ್ರಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ಎನ್.ಆರ್.ರೂಪಶ್ರೀ ಅವರ ‘ಕಾದ ಕಂಗಳ ಕಂಪನ’ ಕವನ ಸಂಕಲನ ಮತ್ತು ‘ಪ್ರೀತಿಯೆಂದರೆ’ ಕಥಾಸಂಕಲನ, ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರೂಪಶ್ರೀ ಅವರ ಬರವಣಿಗೆಯಲ್ಲಿ ಪುರುಷ ವ್ಯವಸ್ಥೆಯ ಅನಾವರಣವನ್ನು ಕಾಣುತ್ತೇವೆ ಎಂದು ಪುಸ್ತಕ ಲೋಕಾರ್ಪಣೆ ಮಾಡಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಹೇಳಿದರು.
ಕಾರ್ಯಕ್ರಮದಲ್ಲಿ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನದ ಗಣೇಶ್ ಕೋಡೂರು ಉಪಸ್ಥಿತರಿದ್ದರು.ಹಿರಿಯ ಪತ್ರಕರ್ತ ಮತ್ತು ಲೇಖಕ ರಾಜು ಅಡಕಳ್ಳಿ ಅಧ್ಯಕ್ಷತೆವಹಿಸಿದ್ದರು.
ಪ್ರೀತಿಯೆಂದರೆ ಕಥಾಸಂಕಲನ ಕುರಿತು ಸವಿಗನ್ನಡ ಪತ್ರಿಕೆಯ ಸಂಪಾದಕರಾದ ರಂಗನಾಥ ಮೈಸೂರು ಮಾತನಾಡಿದರು.ಹರ್ಷಪ್ರಭಾಕರ್ ಮತ್ತು ವಿದುಷಿ ಪನ್ನಗ ಎಸ್.ವಿ.ಗೀತೆಗಳನ್ನು ಹಾಡಿದರು.ಚಂದ್ರಕಲಾ ಕುಮಾರ್ ಮತ್ತು ನಾದಶ್ರೀ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸದ್ವಿದ್ಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಿದ್ವಾನ್ ರಾಮಚಂದ್ರ ಭಟ್ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಎರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಹಿರಿ ಕಿರಿಯ ಕವಿಗಳು ಭಾಗವಹಿಸಿ ಕವನ ವಾಚನ ಮಾಡಿದರು.