ಶಿರಸಿ:ಇಲ್ಲಿನ ಎಂ.ಇ.ಎಸ್. ಚೈತನ್ಯ ಪದವಿ ಪೂರ್ವ ಕಾಲೇಜಿನ ಕೌಮುದಿ ಸಭಾಭವನದಲ್ಲಿ “ಸುಜ್ಞಾನ” ಕಾರ್ಯಕ್ರಮದಡಿ ವಿಜ್ಞಾನ ಪ್ರಶ್ನೋತ್ತರ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮತ್ತು ನಿರ್ಣಾಯಕರಾಗಿ ಡಾ. ಕೇಶವ್ ಹೆಗಡೆ ಖೂರ್ಸೆ ಆಗಮಿಸಿ, ಮಾತನಾಡಿ ಇಂದಿನ ಈ ವ್ಯವಸ್ಥೆಯಲ್ಲಿ ಓದುವವರ ಸಂಖ್ಯೆ ಕಡಿಮೆಯಾಗಿದ್ದು ಓದಿದ ಪುಸ್ತಕವನ್ನು ಬರೆದಾಗ ಮಾತ್ರ ಮೆದುಳಿನಲ್ಲಿ ಶಾಶ್ವತವಾಗಿ ಶೇಖರಣೆಯಾಗುತ್ತದೆ. ಬರೆದಿದ್ದನ್ನು ಉಪನ್ಯಾಸ ರೂಪದಲ್ಲಿ ಹೇಳಿದಾಗ ಅದರ ಉಪಯೋಗ ಶಾಶ್ವತವಾಗಿರುತ್ತದೆ ಎಂದು ಹಲವಾರು ಉದಾಹರಣೆ ಸಹಿತ ವಿಸ್ತರಣೆಯೊಂದಿಗೆ ಮಾತನಾಡುತ್ತಾ ವಿಷಯಗಳನ್ನು ಚರ್ಚಿಸಿದರು.
ಮತ್ತೋರ್ವ ಅತಿಥಿಗಳಾಗಿ ಶ್ರೀ ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೈರುಂಬೆ ಮುಖ್ಯಾಧ್ಯಾಪಕ ನಾಗರಾಜ ಹೆಗಡೆ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ “ಪರೀಕ್ಷೆಯನ್ನು ಎದುರಿಸುವುದು ಹೇಗೆ” ಎಂಬುದನ್ನು ಉದಾಹರಣೆಯ ಮೂಲಕ ಪ್ರೌಢಶಾಲಾ ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾತನಾಡಿದರು.
ಸಭೆಯ ಅಧ್ಯಕ್ಷರಾಗಿದ್ದ ಎಂ.ಇ.ಎಸ್. ಸಂಸ್ಥೆಯ ಅಧ್ಯಕ್ಷರಾದ ಜಿ. ಎಂ. ಹೆಗಡೆ ಮುಳಖಂಡ ಮಾತನಾಡುತ್ತಾ ಈ ರೀತಿಯ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇಂತಹ ಸ್ಪರ್ಧೆಗಳ ಸದುಪಯೋಗ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಕಾಲೇಜು ಉಪಸಮಿತಿ ಅಧ್ಯಕ್ಷರಾದ ಕೆ. ಬಿ. ಲೋಕೇಶ ಹೆಗಡೆ ಸಭೆಯನ್ನು ಉದ್ದೇಶಿಸಿ – ನಮ್ಮ ಸಂಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪಾಠ ಪ್ರವಚನವನ್ನು ಏಕರೂಪದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದು ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿ “ಪರಿಪೂರ್ಣ ಪರಿಶ್ರಮವೇ ಜೀವನ” ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಆತಂಕಗೊಳ್ಳದೇ ಸಮಾಧಾನದಿಂದ ಓದಿ ಮುನ್ನಡೆಯಬೇಕು. ಎಂದು ತಿಳಿಸಿದರು.
ಎಲ್ಲಾ ಸ್ಪರ್ಧೆಗಳಲ್ಲಿ ಅತ್ಯುತ್ತಮವಾಗಿ ಭಾಗವಹಿಸಿದ ಬೈರುಂಬೆಯ ಶ್ರೀ ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕು.ಸ್ಕಂದ ಹೆಗಡೆ ಮತ್ತು ತಂಡಕ್ಕೆ -ಪ್ರಥಮ, ಅಕ್ಷಯ ಎಮ್ ಮತ್ತು ತಂಡಕ್ಕೆ -ದ್ವ್ವಿತೀಯ ಹಾಗೂ ತೇಲಂಗ ಪ್ರೌಢಶಾಲೆಯ ಹರ್ಷಿತಾ ಮತ್ತು ತಂಡಕ್ಕೆ – ತೃತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಪ್ರಾರಂಭವಾಯಿತು. ಪ್ರಾಚಾರ್ಯರಾದ ಡಾ. ರಾಘವೇಂದ್ರ ಹೆಗಡೆಕಟ್ಟೆ ಇವರು ಸಭಿಕರನ್ನು ಮತ್ತು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಈ ಕಾರ್ಯಕಮದ ಉದ್ದೇಶವನ್ನು ವಿವರಿಸಿದರು. ಉಪನ್ಯಾಸಕರಾದ ಶ್ರೀಮತಿ ಮಮತಾ ವಿ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮತ್ತು ಉಪನ್ಯಾಸಕರಾದ ಕು.ಮೇಘನಾ ಹೆಗಡೆ ಅವರು ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದರು.