ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪುನರ್ ಪರಿಶೀಲನಾ ಪ್ರಕ್ರಿಯೆಗೆ ವ್ಯಾಪಕವಾದ ಕಾನೂನಾತ್ಮಕ ಆಕ್ಷೇಪಣೆ ಬಂದಿರುವ ಹಿನ್ನಲೆಯಲ್ಲಿ ನ.೨೮ ರಂದು ಸರ್ಕಾರದ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತೆಗೆದುಕೊಂಡ ನಡುವಳಿಕೆ ಮತ್ತು ಪುನರ್ ಪರಿಶೀಲನಾ ಪ್ರಕ್ರಿಯೆ ಸ್ಥಗಿತಕ್ಕೆ ಸರ್ಕಾರದ ಮೇಲೆ ತೀವ್ರತರದ ಒತ್ತಡ ತರಲಾಗುತ್ತಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ಹೇಳಿದರು.
ಅವರು ಕೋಲಾಪೇರಡೈಜ್ ವಸತಿ ಗೃಹದ ಸಭಾಂಗಣದಲ್ಲಿ ಭಟ್ಕಳ ತಾಲೂಕಿನ ಗ್ರೀನ್‌ಕಾರ್ಡ ಪ್ರಮುಖರ ತರಬೇತಿ ಶಿಬಿರವನ್ನ ಉದ್ದೇಶಿಸಿ ಮಾತನಾಡಿದ್ದರು.
ಕಾನೂನಿಗೆ ವ್ಯತಿರಿಕ್ತವಾಗಿ ಕಾನೂನುಭಾಹಿರವಾಗಿ ಅರ್ಜಿಗಳು ಅಸ್ತಿತ್ವವಿಲ್ಲದ ಸಮಿತಿಯಿಂದ ಅರ್ಜಿ ವಿಲೇವಾರಿ ಮಾಡುತ್ತಿರುವದು ಮತ್ತು ನಿರ್ದಿಷ್ಟ ಮೂರು ತಲೆಮಾರಿನ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಕ್ಕೆ ಅರಣ್ಯವಾಸಿಗಳಿಗೆ ನೋಟೀಸ್ ನೀಡುತ್ತಿರುವದು ಕಾನೂನು ಭಾಹಿರ ಕೃತ್ಯವಾಗಿದೆ. ಈ ಹಿನ್ನಲೆಯಲ್ಲಿ ಹೋರಾಟಗಾರರ ವೇದಿಕೆಯು ಸಮಿತಿಯ ಪುನರ್ ಪರಿಶೀಲನಾ ಪ್ರಕ್ರಿಯೆಗೆ ಕಾನೂನಾತ್ಮಕ ಹೋರಾಟವನ್ನು ಪ್ರಾರಂಭಿಸಿದೆ ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಪದಾಧಿಕಾರಿಗಳಾದ ದೇವರಾಜ ಗೊಂಡ, ಕಯ್ಯುಮ ಸಾಬ, ಪಾಂಡುರಂಗ ನಾಯ್ಕ ಬೆಳಕೆ, ಚಂದ್ರು ನಾಯ್ಕ, ಚಂದ್ರಹಾಸ್ ಭಟ್ಕಳ, ಸಲೀಮ ಹೆಬಳೆ, ಮಂಜುನಾಥ ನಾಯ್ಕ ಕಾಯ್ಕಣಿ, ಜಯಲಕ್ಷ್ಮಿ ನಾಯ್ಕ, ಶಾಂತಾ ನಾಯ್ಕ ಶಿರಾಲಿ, ರಾಮಚಂದ್ರ ಆಚಾರಿ, ರತ್ನಾ ಮೋಗೇರ್, ನಾಗಮ್ಮ ಮೋಗೇರ್ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.
ಗ್ರೀನ್ ಕಾರ್ಡ ಪ್ರಮುಖರು:
ಜಿಲ್ಲೆಯ ಪ್ರತಿಯೊಂದು ತಾಲೂಕಿನಿಂದ ೧೦೦ ಜನರಂತೆ ಜಿಲ್ಲೆಯಲ್ಲಿ ಒಂದು ಸಾವಿರ ಗ್ರೀನ್‌ಕಾರ್ಡ್ ಪ್ರಮುಖರನ್ನು ಗುರುತಿಸಲಾಗಿದೆ. ಅವರಿಗೆ ಸಂಘಟನಾತ್ಮಕ ಚಟುವಟಿಕೆ ಮತ್ತು ಕಾನೂನು ಜ್ಞಾನವನ್ನು ವೃದ್ಧಿಸುವ ಕಾರ್ಯ ಮುಂದಿನ ಮೂರು ತಿಂಗಳಲ್ಲಿ ಜಿಲ್ಲಾಧ್ಯಂತ ಕ್ರಿಯಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.