Slide
Slide
Slide
previous arrow
next arrow

ವಸುಧೆಯ ಸಂಗೀತ ಸುಧೆಗೆ ರಜತದ ಸಂಭ್ರಮ

300x250 AD

ಶ್ರೀ ಸದ್ಗುರು ಹಿಂದೂಸ್ತಾನಿ ಸಂಗೀತ ದೇವಾಲಯಕ್ಕೆ ರಜತ ಕಳಶ | ಇಂದಿನಿಂದ ಸಾಗರದಲ್ಲಿ ಪಂಚವಿಂಶಃ ರಾಷ್ಟ್ರೀಯ ಸಂಗೀತೋತ್ಸವ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯೊಂದಿತ್ತು. ಆದರೆ ಹೆಣ್ಣೊಂದು ಸಂಗೀತ ಕಲಿತು ಗಾನಸುಧೆಯ ದೇವಾಲಯವನ್ನೇ ತೆರೆದು, ಆ ದೇವಾಲಯದ ಗರ್ಭಗುಡಿಯಲ್ಲಿ ಸಂಗೀತವನ್ನೇ ಪ್ರತಿಷ್ಟಾಪಿಸಿ, ಗುರುವನ್ನಾಗಿಸಿ ನಿತ್ಯ ಆರಾಧಿಸಿ, ಪೂಜಿಸಿದ ಪ್ರತಿಫಲವೆಂಬಂತೆ ಇಂದು ಸಾವಿರಾರು ಸಂಗೀತದ ವಿದ್ಯಾರ್ಥಿಗಳಿಗೆ ಗುರುವಾಗಿ ಸಾಧನೆಯ ಪುಟದಲ್ಲಿ ಅಚ್ಛೊತ್ತಿರುವ ವಸುಧಾ ಶರ್ಮಾ ಎಂಬ ಸಂಗೀತದ ಗಾನ ಕೋಗಿಲೆಯ ಸಂಗೀತ ದೇವಾಲಯಕ್ಕೆ ರಜತ ಮಹೋತ್ಸವದ ಹರುಷ ಈ ವರುಷ.

ಸಾಗರದಲ್ಲಿ ಕಳೆದ ಇಪ್ಪತ್ತೈದು ವಸಂತಗಳ ಹಿಂದೆ ಹೊಸ ಕನಸನ್ನು ಹೊತ್ತು ಪುಟ್ಟದಾಗಿ ಆರಂಭಗೊಂಡ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶಾಲೆಗೆ ಇಂದು ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು. ಸಾವಿರಕ್ಕೂ ಅಧಿಕ ಹಿತೈಷಿಗಳು. ದೊಡ್ಡ ಸಂಖ್ಯೆಯ ಅಭಿಮಾನಿ ಬಳಗಗಳು. ಸಂಗೀತ ಶಾಲೆ ಎನ್ನುವುದಕ್ಕಿಂತ ಅದೊಂದು ನಾದ ಸರಸ್ವತಿಯ ದೇಗುಲವೇ ಹೌದು. ಈ ಸಂಗೀತದ ದೇವಾಲಯಕ್ಕೆ ಇದೀಗ 25 ನೇ ರಜತ ಮಹೋತ್ಸವದ ಸಂಭ್ರಮ. ಪ್ರತಿ ವರ್ಷ ನಾಡಿನ ಹೆಸರಾಂತ ಖ್ಯಾತ ಕಲಾವಿದರ ಸಂಗಮದಲ್ಲಿ ರಾಷ್ಟ್ರೀಯ ಸಂಗೀತೋತ್ಸವವು ನಡೆಯುತ್ತಾ ಬಂದಿದ್ದು, ವಿದುಷಿ ವಸುಧಾ ಶರ್ಮಾ ದಂಪತಿಗಳ ನೇತೃತ್ವದಲ್ಲಿ, ಸ್ಥಳೀಯರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಅತ್ಯುತ್ತಮವಾಗಿ ನಡೆಯುತ್ತಾ ಬಂದಿದೆ. ಜೊತೆಗೆ ರಾಷ್ಟ್ರಮಟ್ಟದಲ್ಲಿ ತನ್ನ ಹಿರಿಮೆಯನ್ನು ಬಿಂಬಿಸಿದ ಕೀರ್ತಿ ಈ ಸಂಗೀತ ದೇವಾಲಯದ್ದಾಗಿದೆ.

ಹಾಡು ಹಕ್ಕಿಯ ಮಡಿಲ ಬಳ್ಳಿ ಇಂದು ಬೃಹತ್ ಮರವಾಗಿ ಸಾಸಿರ ಕುಡಿಗೆ ನೆರಳು :

ಇಂದು ಹಿಂದೂಸ್ಥಾನಿ ಸಂಗೀತದಲ್ಲಿ ತನ್ನ ಅವಿರತ ಶ್ರಮ, ಪ್ರಯತ್ನದ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ವಿದುಷಿ ವಸುಧಾ ಶರ್ಮಾ ಮೂಲತಃ ಶಿರಸಿ ತಾಲೂಕಿನ ಕಾನಗೋಡು ಸಮೀಪದ ಗೋಳಗೋಡಿನವರು. ಕಲೆಯನ್ನೇ ತನ್ನ ಮನೆದೇವರಂತೆ ಆರಾಧಿಸುತ್ತಿದ್ದ ಕಲಾವಿದರ ಕುಟುಂಬದ ಕುಡಿ. ಸಂಗೀತ, ನಾಟಕ, ಭಜನೆ ಸೇರಿದಂತೆ ಕಲಾಸೇವೆಯಲ್ಲಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟು, ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎಂಬ ಸಾಲಿಗೆ ಅನುರೂಪವಾಗಿ ಬದುಕಿದ್ದ ಜಿ.ಎಸ್. ಹೆಗಡೆ ಗೋಳಗೋಡು ಇವರ ದಂಪತಿಯ ಪುತ್ರಿಯಾಗಿ ಕಲಾ ಸೇವೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅದರಲ್ಲೇ ತನ್ನ ಬದುಕಿನ ಜೊತೆಗೆ ಸಾವಿರಾರು ಸಂಗೀತ ವಿದ್ಯಾರ್ಥಿಗಳಿಗೆ ಬದುಕಿನ ಬೆಳಕಾದವಳು. ಗೋಳಗೋಡಿನಲ್ಲಿ ಆರಂಭವಾದ ಲಾಲಿಹಾಡಿನ ಇಂಪು, ಇಂದು ರಾಷ್ಟ್ರೀಯ ಮಟ್ಟದ ಭವ್ಯ ವೇದಿಕೆಯಲ್ಲಿ ಸಂಗೀತದ ಗಾನಸುಧೆ ಹರಿಸಲು ಸಹಕಾರಿಯಾಗಿದೆ ಎಂದರೆ ಸುಳ್ಳಾಗಲಾರದು. ಜೊತೆಗೆ ಕುಟುಂಬ ಸದಸ್ಯರ ಸಹಕಾರ, ಗುರುಗಳ ದಿವ್ಯ ಆಶೀರ್ವಾದ, ಹಿತೈಷಿಗಳ ಆಪ್ತತೆಯೂ ಅವಳ ಜೊತೆ ಸದಾ ಜೊತೆಯಾಗಿ ನಿಂತಿದೆ.

ಸಪ್ತಪದಿ ತುಳಿದ ಹಿಂದೂಸ್ಥಾನಿ-ಕರ್ನಾಟಿಕ್ ಜೋಡಿ :

300x250 AD

ಬಾಲ್ಯದಿಂದನೇ ಪ್ರತಿಭಾನ್ವಿತೆಯಾಗಿದ್ದ ವಸುಧಾ ಹೆಗಡೆ, ತನ್ನ ಸಂಗೀತದ ಅಭ್ಯಾಸದಲ್ಲಿ ಬಂಗಾರದ ಪದಕ ಗೆದ್ದವಳು. ನಂತರದಲ್ಲಿ ನಿರಂತರ ಅಧ್ಯಯನ, ಅಧ್ಯಾಪನ ಮತ್ತು ಸಾಧನೆಯ ಕಾರಣಕ್ಕೆ ಸಂಗೀತವನ್ನೇ ಬದುಕನ್ನಾಗಿಸಿಕೊಂಡವಳು. ಸಂಗೀತದ ಈ ಹಸುರಿನ ಎಳೆ ಬಳ್ಳಿಗೆ ಮದುವೆಯ ನಂತರ ನೀರೇರೆದು ಬೃಹತ್ ಆಲದ ಮರವನ್ನಾಗಿಸುವಲ್ಲಿ ಸಾಗರದ ಹಳೇ ಇಕ್ಕೇರಿ ಶರ್ಮಾಜಿ ಕುಟುಂಬದ ಪಾತ್ರವೂ ಹಿರಿದಾಗಿದೆ. ಮನೆಗೆ ಸೊಸೆಯಾಗಿ ಬಂದ ಗಾನ ಸರಸ್ವತಿಗೆ ಸದಾ ಪ್ರೋತ್ಸಾಹವನ್ನಿತ್ತು, ಅದಕ್ಕೆ ನೀರೆರೆದ ಕೀರ್ತಿ ಸಹ ಹಳೇಇಕ್ಕೇರಿ ಕುಟುಂಬದ್ದು. ವಸುಧಾ ಅವರ ಕೈ ಹಿಡಿದವರೂ ಸಹ ಸಂಗೀತದಲ್ಲಿ ಸಾಧನೆಗೈದವರೇ ಆಗಿದ್ದಾರೆ. ವಿದ್ವಾನ್ ಎಚ್.ಎನ್. ನರಸಿಂಹಮೂರ್ತಿ ಖ್ಯಾತ ಮೃದಂಗ ವಾದಕರು. ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತದ ಈ ಜೋಡಿಯಿಂದ ಮೋಹನ ರಾಗ ಮೂಡಿತು. ಇಂದು ಈ ಜೋಡಿಯು ನಾಡಿನಾದ್ಯಂತ ಸಂಗೀತದ ರಸದೌತಣ ಬಡಿಸುತ್ತಿದ್ದಾರೆ.

ವೇದನಾದ.. ಸ್ವರವಾದ ವಸುಧಾ :

ಸಂಗೀತಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಕನಸು ಜೋರಾದಾಗ ನೆನಪಾಗಿದ್ದು ಶರ್ಮಾಜಿ ಅವರ ವೇದ ಮತ್ತು ನಾದದ ವಿದ್ವತ್ತು. ಆ ಕಾರಣಕ್ಕೆ ಅವರಿಗೆ ಗೌರವ ಸಮರ್ಪಿಸುವ ಹಿನ್ನಲೆಯಲ್ಲಿ ವೇದನಾದ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಆರಂಭಿಸಿ ಆ ಮೂಲಕ ನಾಡಿನಾದ್ಯಂತ ಸಂಗೀತದ ಕಾರ್ಯಕ್ರಮ, ತರಬೇತಿ, ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ ವಸುಧಾ ಶರ್ಮ ದಂಪತಿಗಳು. ವೇದನಾದಕ್ಕೆ ವಸುಧಾ ಸುಸ್ವರವಾದರೆ, ನರಸಿಂಹಮೂರ್ತಿ ಆಧಾರಸ್ಥಂಬವಾದರು. ಆ ಕಾರಣಕ್ಕೆ ಸಂಗೀತ ಲಹರಿಯ ನಿರಂತರ ಪ್ರವಾಹಕ್ಕೆ ಇಂದು ಸಾವಿರಾರು ಅಭಿಮಾನಿಗಳು, ವಿದ್ಯಾರ್ಥಿಗಳು, ಹಿತೈಷಿಗಳು ಆ ಸಂಗೀತದ ಅಲೆಯಲ್ಲಿ, ಸೆಲೆಯಲ್ಲಿ ಈ ಸಂಗೀತ ಶಾಲೆಯ ನಿರಂತರ ಪೋಷಕರಾಗಿದ್ದಾರೆ.

ಇಂದಿನಿಂದ ನಾಲ್ಕು ದಿನಗಳ ಕಾಲ ಪಂಚವಿಂಶಃ ರಾಷ್ಟ್ರೀಯ ಸಂಗೀತೋತ್ಸವ :

ಇಂದು ಜನವರಿ 11 ರಿಂದ 14 ರ ವರೆಗೆ ಸಾಗರದ ಗಾಂಧೀ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಇಪ್ಪತ್ತೈದನೇ ವರ್ಷದ ರಾಷ್ಟ್ರೀಯ ಸಂಗೀತೋತ್ಸವ ನಡೆಯಲಿದ್ದು, ಗಾನ ಸರಸ್ವತಿ ಧರೆಗಿಳಿದು ಅಲ್ಲಿಯ ವಿದ್ಯಾರ್ಥಿಗಳ, ಕಲಾವಿದರುಗಳ ಸಂಗೀತ ಸೇವೆಯನ್ನು ಆರಾಧಿಸಲಿದ್ದಾಳೆ ಎಂದರೆ ತಪ್ಪಾಗಲಾರದು. ಗಾನಬಳ್ಳಿಯ ಬೆಳ್ಳಿ ಹೆಜ್ಜೆಯ ಈ ಸುಸಂದರ್ಭದಲ್ಲಿ ರಜತ ಸಾರಂಗಿಯಿಂದ ಸಂಗೀತದ ನವ ಪರ್ವ ಹೊರಹೊಮ್ಮಲಿ. ಸಂಗೀತ ಉಳಿಯಬೇಕು, ಬೆಳೆಯಬೇಕು ಜಗದ್ವಿಖ್ಯಾತಗೊಳ್ಳಬೇಕು. ಆ ಮೂಲಕ ಸಂಗೀತವನ್ನೇ ಉಸಿರನ್ನಾಗಿಸಿಕೊಂಡ ಎಲ್ಲ ಸಂಗೀತದ ಮನಗಳು ವಿಶ್ವವನ್ನು ಬೆಳಗಲಿ. ಪ್ರಜ್ವಲಿಸಲಿ. ನಾಡಿನ ಖ್ಯಾತ ಹಿರಿ ಕಿರಿಯ ಕಲಾವಿದರುಗಳ ಸಂಗಮವಾಗಿರುವ ಈ ಇಪ್ಪತ್ತೈದನೇ ರಾಷ್ಟ್ರೀಯ ಸಂಗೀತೋತ್ಸವ ಸಂಗೀತ ಪ್ರಪಂಚದ ಸಾಧನೆಯ ಪುಟಗಳಲ್ಲಿ ತನ್ನಚ್ಚನ್ನು ಮೂಡಿಸಲಿ. ಕಾರ್ಯಕ್ರಮ ಯಶಸ್ಸಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

Share This
300x250 AD
300x250 AD
300x250 AD
Back to top