ಯಲ್ಲಾಪುರ: ಅಡಕೆ ಬೆಳೆಗೆ ಕೊಳೆರೋಗ ಬಾಧಿಸಿರುವ ತಾಲೂಕಿನ ಬೀಗಾರ, ವಜ್ರಳ್ಳಿ, ಈರಾಪುರ ಭಾಗಗಳಿಗೆ ತೋಟಗಾರಿಕೆ ಸಹಾಯಕ ಅಧಿಕಾರಿ ಕೀರ್ತಿ ಬಿ.ಎಂ. ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಿದರು.
ಕೊಳೆರೋಗ ತೀವ್ರವಾಗಿ ಹರಡಿರುವುದರಿಂದ ಔಷಧಿ ಸಿಂಪರಣೆ ಮಾಡಲು ಕೊನೆಗೌಡರ ಕೊರತೆಯುಂಟಾಗಿದೆ. ಡ್ರೈಯರ್‌ಗಳ ಕೊರತೆಯಿಂದ ಬೆಳೆಗಾರರು ಕಷ್ಟಪಡುತ್ತಿದ್ದಾರೆ. ಬಲಿಯದ ಎಳೆಯ ಅಡಿಕೆಗಳು ಉದುರಿದ ಪರಿಣಾಮ ಮುಂಬರುವ ಫಸಲಿನಲ್ಲಿ ಅಪಾರ ನಷ್ಟ ಸಂಭವಿಸುವ ಸಾಧ್ಯತೆಯಿದೆ. ತೋಟಗಳಿಗೆ ಮಂಗನ ಕಾಟವು ಹೆಚ್ಚಾಗಿದ್ದು ಅಡಕೆ ಬೆಳೆಗಾರರು ಕೊಳೆ ರೋಗ ಹಾಗೂ ಮಂಗನ ಕಾಟದಿಂದ ಬೇಸತ್ತು ಹೋಗಿದ್ದಾರೆ. ಸರ್ಕಾರ ಈಗ ಎಲ್ಲ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು. ಮಂಗಗಳನ್ನು ಸ್ಥಳಾಂತರಗೊಳಿಸಬೇಕು ಮತ್ತು ಕೊಳೆ ರೋಗಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ತೋಟಗಾರಿಕಾ ಅಧಿಕಾರಿ ಕೀರ್ತಿ ಬಿಎಂ ಅವರಿಗೆ ರೈತರು ಮನವಿ ಮಾಡಿದರು.
ರೈತನ ಮನವಿಗೆ ಸ್ಪಂದಿಸಿದ ಅಧಿಕಾರಿ ಕೀರ್ತಿ ಅವರು, ಬಹುತೇಕ ಈ ಭಾಗದಲ್ಲಿ ಕೊಳೆ ರೋಗ ಹಬ್ಬುತ್ತಿರುವುದು ಕಂಡು ಬಂದಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.