ಯಲ್ಲಾಪುರ: ಇತ್ತೀಚಿಗೆ ಅರಣ್ಯ ಸಚಿವರ ಒತ್ತುವರಿ ಒಕ್ಕಲೆಬ್ಬಿಸುವ ಆದೇಶದ ಪ್ರಕಾರ, ಒಕ್ಕಲೆಬ್ಬಿಸುವ ಅರಣ್ಯ ಅತಿಕ್ರಮಣದಾರರ ಪಟ್ಟಿಯನ್ನು ರಚಿಸಲು ಅರಣ್ಯ ಸಿಬ್ಬಂದಿಗಳು ರಾಜ್ಯಾದ್ಯಂತ ಸಕ್ರಿಯವಾಗಿ ಚಾಲನೆ ಪ್ರಾರಂಭಿಸಿದ್ದಾರೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.2 ರಂದು ರಾಜ್ಯ ಸರ್ಕಾರದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯವರು 2015ರ ನಂತರ ಒತ್ತುವರಿ ಮಾಡಿರುವುದನ್ನು ಒಕ್ಕಲೆಬ್ಬಿಸಲು ಒಂದು ತಿಂಗಳ ಕಾಲಮಾನದ ನಿಗದಿಗೊಳಿಸಿದ ಹಿನ್ನಲೆಯಲ್ಲಿ ಮೇಲಿನ ಒಕ್ಕಲೆಬ್ಬಿಸುವ ಪ್ರಕ್ರಿಯೆಯು ಅರಣ್ಯ ಸಚಿವರ ಆದೇಶದ ನಂತರ ಚಾಲನೆ ಪ್ರಾರಂಭವಾಗಿರುತ್ತದೆ ಎಂದು ಅವರು ಹೇಳಿದರು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಜಿ.ಪಿ.ಎಸ್ ಆಗದೇ ಇರುವ, ಈ ಹಿಂದೆ ಕರ್ನಾಟಕ ಅರಣ್ಯ ಕಾಯಿದೆ ಕಲಂ 64ಎ ಅಡಿಯಲ್ಲಿ ಒಕ್ಕಲೆಬ್ಬಿಸಲು ಆದೇಶವಾಗಿರುವ ಅತಿಕ್ರಮಣದಾರರ ಪಟ್ಟಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸದೆ ಇರುವಂತಹ ಅತಿಕ್ರಮಣದಾರರ ಪಟ್ಟಿ ಮತ್ತು ವಾಸ್ತವ್ಯ ಮತ್ತು ಸಾಗುವಳಿ ಹೊರತಾಗಿ ವಾಣಿಜ್ಯಕರಣ ಮತ್ತು ಇನ್ನಿತರ ಉದ್ದೇಶಕ್ಕೆ ಅತಿಕ್ರಮಣವಾಗಿರುವ ಪ್ರದೇಶವನ್ನು ಪಟ್ಟಿಗೆ ಸೇರಿಸಿ ಸಕ್ರಿಯವಾಗಿ ರಾಜ್ಯಾದ್ಯಂತ ಅರಣ್ಯ ಸಿಬ್ಬಂದಿಗಳು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ನೈಜ ಅತಿಕ್ರಮಣದಾರರಿಗೆ ಅನ್ಯಾಯವಾಗಕೂಡದು:
ಅರಣ್ಯ ಭೂಮಿ ಮೇಲೆ ವಾಸ್ತವ್ಯ ಮತ್ತು ಸಾಗುವಳಿ ಉದ್ದೇಶಕ್ಕೆ ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರಣ್ಯ ಅತಿಕ್ರಮಣದಾರರಿಗೆ ಕಾನೂನು ಹೆಸರಿನಲ್ಲಿ ಸಚಿವರ ಆದೇಶದ ನೆಪದಲ್ಲಿ ಅರಣ್ಯ ಸಿಬ್ಬಂದಿಗಳು ದುರುಪಯೋಗ ಮಾಡಿಕೊಳ್ಳದೇ, ಅರಣ್ಯ ಅತಿಕ್ರಮಣದಾರರಿಗೆ ಅನ್ಯಾಯ ಮತ್ತು ದೌಜ್ಯನ್ಯ ಜರುಗಬಾರದೆಂದು ಸಚಿವ ಈಶ್ವರ್ ಖಂಡ್ರೆಯವರಿಗೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.