ದಾಂಡೇಲಿ : ನಗರಸಭೆಯ ಸಭಾಭವನದಲ್ಲಿ ಅಧ್ಯಕ್ಷ ಅಷ್ಪಾಕ್ ಶೇಖ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯು ಶುಕ್ರವಾರ ಸಂಜೆ ಜರುಗಿತು.
ಸಭೆಯಲ್ಲಿ 2025 – 26 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಕ್ರಿಯಾ ಯೋಜನೆ ತಯಾರಿಸುವ ಕುರಿತು ಚರ್ಚೆ ನಡೆಯಿತು. 2025 -26 ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ, ಎಸ್.ಸಿ. ಎಸ್.ಪಿ, ಟಿ.ಎಸ್.ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಕ್ರಿಯಾಯೋಜನೆ ತಯಾರಿಸುವ ಬಗ್ಗೆಯೂ ಚರ್ಚೆ ನಡೆಯಿತು. ಸರ್ಕಾರದಿಂದ ನಗರಸಭೆಗೆ ಬಿಡುಗಡೆಯಾದ ವಿವಿಧ ಯೋಜನೆಗಳಲ್ಲಿ ಉಳಿತಾಯವಾಗಿರುವ ಮೊತ್ತದಲ್ಲಿ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ 24×7 ಕುಡಿಯುವ ನೀರು ಯೋಜನೆಗೆ ಸಂಬಂಧಪಟ್ಟಂತೆ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ರಸ್ತೆ ತೀವ್ರ ಹದಗೆಟ್ಟಿದೆ. ಹಾಗಾಗಿ ಈಗ ಮಳೆಗಾಲವಾಗಿರುವುದರಿಂದ ಸದ್ಯದ ಮಟ್ಟಿಗೆ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರಸಭಾ ಸದಸ್ಯರಾದ ಮೋಹನ ಹಲವಾಯಿ, ದಶರಥ ಬಂಡಿವಡ್ಡರ ಅವರು ಆಗ್ರಹಿಸಿದರು.
ಹಳೆ ದಾಂಡೇಲಿಯಲ್ಲಿ ಕಳೆದ ಮೂರು ವರ್ಷಗಳಿಂದ ರಸ್ತೆ ಹದಗೆಟ್ಟಿರುವುದರಿಂದ ಸ್ಥಳೀಯ ಜನತೆ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಇಲ್ಲಿ ಕೂಡಲೇ ರಸ್ತೆ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯ ವಾರ್ಡಿನ ಸದಸ್ಯೆ ಸಪೂರ ಯರಗಟ್ಟಿ ಅವರು ಒತ್ತಾಯಿಸಿದರು. ಈ ರಸ್ತೆ ದುರಸ್ತಿಯ ಕುರಿತಂತೆ ಈಗಾಗಲೇ ಟೆಂಡರ್ ನೀಡಲಾಗಿದ್ದು, ಕಾಮಗಾರಿ ಪ್ರಾರಂಭ ಮಾಡುವ ಮುಂಚೆ, ತಾತ್ಕಾಲಿಕ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಲು ಈಗಾಗಲೇ ಸಂಬಂಧಿಸಿದ ಗುತ್ತಿಗೆದಾರರಿಗೆ ಶಾಸಕರ ಕಾರ್ಯಾಲಯದಿಂದ ಸೂಚನೆ ನೀಡಿರುವುದನ್ನು ಮೋಹನ ಹಲವಾಯಿಯವರು ಸಭೆಗೆ ತಿಳಿಸಿದರು. ಮಳೆ ಮುಗಿದ ಒಂದೆರಡು ದಿನಗಳಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಅಷ್ಪಾಕ್ ಶೇಖ ಅವರು ನೀಡಿದರು.
ಗಾಂಧಿನಗರದಲ್ಲಿ ಶೌಚಾಲಯ ನಿರ್ಮಾಣವಾಗಿದೆ, ಆದರೆ ಇನ್ನೂ ವಿದ್ಯುತ್ ಮೀಟರ್ ಅಳವಡಿಸಿಲ್ಲ, ಸಿಂಟೆಕ್ಸನ್ನು ಸಹ ಅಳವಡಿಸಿಲ್ಲ ಯಾಕೆ ಎಂದು ಸದಸ್ಯ ಬುದವಂತಗೌಡ ಪಾಟೀಲ್ ಪ್ರಶ್ನಿಸಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆಯನ್ನು ಅಷ್ಪಾಕ್ ಶೇಖ ಅವರು ನೀಡಿದರು.
ಸದಸ್ಯರಾದ ರೋಶನಜಿತ್, ಆಸೀಪ್ ಮುಜಾವರ, ಮೋಹನ ಹಲವಾಯಿ, ಸಂಜಯ ನಂದ್ಯಾಳ್ಕರ ಮತ್ತು ದಶರಥ ಬಂಡಿವಡ್ಡರ ಅವರು ಒಳ ಕ್ರೀಡಾಂಗಣದ ಬ್ಯಾಡ್ಮಿಂಟನ್ ಕೋರ್ಟ್ ದುರಸ್ತಿ ಕಾರ್ಯ ಇನ್ನೂ ಮುಗಿದಿಲ್ಲ. ಇದರಿಂದ ಸ್ಥಳೀಯ ಮಕ್ಕಳಿಗೆ ಅಭ್ಯಾಸ ಮಾಡಲು ತೊಂದರೆಯಾಗಿದೆ. ದಾಂಡೇಲಿಯ ಮಕ್ಕಳ ಕ್ರೀಡಾ ಭವಿಷ್ಯದ ಹಿತ ದೃಷ್ಟಿಯಿಂದ ಈ ಬಗ್ಗೆ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಹಾಗೂ ಈ ಹಿಂದಿನ ಟೆಂಡರನ್ನು ರದ್ದುಗೊಳಿಸಿ ಮರು ಟೆಂಡರ್ ಕರೆಯಬೇಕು. ಈ ಕಾರ್ಯವನ್ನು ಆದ್ಯತೆಯ ಮೇರೆಗೆ ಮತ್ತು ಗುಣಮಟ್ಟದಲ್ಲಿ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ತ್ವರಿತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಷ್ಪಾಕ್ ಶೇಖ ಹೇಳಿದರು.
ಬಂಗೂರುನಗರ ಪ್ರದೇಶದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಿಂದ ಅಥವಾ ನಗರಸಭೆಯ ಅನುದಾನದಿಂದ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ನಮ್ಮ ಅವಧಿ ಮುಗಿಯುವುದರೊಳಗೆ ಮಾಡಬೇಕೆಂದು ದಶರಥ ಬಂಡಿವಡ್ಡರ ಅವರು ಆಗ್ರಹಿಸಿದರು.
ನಗರ ಸಭೆಯ ವಸತಿ ಗೃಹಗಳಲ್ಲಿ ಬೀಡು ಬಿಟ್ಟಿರುವ ನಿವೃತ್ತ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮನೆಯನ್ನು ತೆರೆವುಗೊಳಿಸಿ, ಹೊಸದಾಗಿ ಬಂದಿರುವ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ನೀಡುವಂತೆ ದಶರಥ ಬಂಡಿವಡ್ಡರ ಅವರು ಆಗ್ರಹಿಸಿದ್ದರಲ್ಲದೇ, ಈ ನಿಟ್ಟಿನಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆಯೂ ಹಾಗೂ ಸದರಿ ನಿವೃತ್ತ ಸಿಬ್ಬಂದಿಗಳು ಇರುವ ವಸತಿ ಗೃಹಗಳಿಗೆ ಅಗತ್ಯ ಮೂಲ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಸೌಕರ್ಯವನ್ನು ಕಡಿತಗೊಳಿಸುವಂತೆ ಆಗ್ರಹಿಸಿದರು. ಸಭೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಅಷ್ಪಾಕ್ ಶೇಖ ಅವರು ನೀಡಿದರು.
ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ರಾಜಶೇಖರ ಐ.ಎಚ್.ಅವರು ಸುಭಾಷ್ ನಗರದ ಒಳ ಕ್ರೀಡಾಂಗಣದ ಸುತ್ತಲೂ ವಾಕಿಂಗ್ ಪಾಥ್ ನಿರ್ಮಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಅನುದಾನದಲ್ಲಿ ನೀಡುವ ಸೌಲಭ್ಯಗಳ ಬಗ್ಗೆ ಸಮರ್ಪಕ ವಿವರಣೆಯನ್ನು ನೀಡಬೇಕು. ಹದಗೆಟ್ಟಿರುವ ರಸ್ತೆ ದುರಸ್ತಿಗೆ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಸದಸ್ಯರಾದ ಯಾಸ್ಮಿನ್ ಕಿತ್ತೂರು, ಸರಸ್ವತಿ ರಜಪೂತ್, ನರೇಂದ್ರ ಚೌವ್ಹಾಣ್, ಮಜೀದ್ ಸನದಿ, ಅನಿಲ್ ನಾಯ್ಕರ, ವೆಂಕಟ್ರಮಣಮ್ಮ ಮೈಥುಕುರಿ, ರಮಾ ರವೀಂದ್ರ ಮೊದಲಾದವರು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ರಾಮಲಿಂಗ ಜಾಧವ, ಪೌರಾಯುಕ್ತ ವಿವೇಕ ಬನ್ನೆ, ನಗರ ಸಭೆಯ ಸದಸ್ಯರು, ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.