ದಾಂಡೇಲಿ : ನಗರದಲ್ಲಿ ಮಳೆಯಿಂದಾಗಿ ಲಿಂಕ್ ರಸ್ತೆಯ ಮನೆಯೊಂದರೊಳಗೆ ಶುಕ್ರವಾರ ಮತ್ತೆ ಗಟಾರದ ತ್ಯಾಜ್ಯ ನೀರು ನುಗ್ಗಿ ಸಮಸ್ಯೆಯಾಗಿದ್ದು, ಸ್ಥಳಕ್ಕೆ ನಗರ ಸಭೆಯ ಪೌರಾಯುಕ್ತ ವಿವೇಕ ಬನ್ನೆ ಸಿಬ್ಬಂದಿಗಳ ಜೊತೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.
ಲಿಂಕ್ ರಸ್ತೆಯ ನಿವಾಸಿ ವೆಂಕಟೇಶ ಪಗಡೆ ಎಂಬವರ ಮನೆಗೆ ಮತ್ತು ಪಕ್ಕದಲ್ಲಿರುವ ಸಂತೋಷ್ ಹೋಟೆಲಿನ ಕೆಳ ಅಂತಸ್ತಿನೊಳಗೆ ಮತ್ತೆ ನೀರು ನುಗ್ಗಿದ್ದು, ಈ ನಿಟ್ಟಿನಲ್ಲಿ ನಗರಸಭೆಯ ಪೌರಾಯುಕ್ತರಾದ ವಿವೇಕ ಬನ್ನೆ ಅವರು ನಗರ ಸಭೆಯ ಸಿಬ್ಬಂದಿಗಳ ಜೊತೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಗಟಾರದ ಹತ್ತಿರದಲ್ಲೇ ಕೆಳ ಅಂತಸ್ತಿನಲ್ಲಿ ಮನೆ ಇರುವುದರಿಂದ ಈ ಸಮಸ್ಯೆಯಾಗುತ್ತಿದೆ. ಸದ್ಯ ಇರುವ ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ಆದಾಗ್ಯೂ ಸುರಕ್ಷತೆಯ ಹಿತ ದೃಷ್ಟಿಯಿಂದ ಕೆಲ ಸಮಯದವರೆಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿವೇಕ ಬನ್ನೆ ಅವರು ಸೂಚನೆಯನ್ನು ನೀಡಿದರು. ಇಲ್ಲಿ ಮನೆ ಕಟ್ಟುವಂತಹ ಸಂದರ್ಭದಲ್ಲಿ ನಿಯಮಗಳನ್ನು ಪಾಲನೆ ಮಾಡುತ್ತಿದ್ದಲ್ಲಿ ಈ ಸಮಸ್ಯೆ ಆಗುತ್ತಿರಲಿಲ್ಲ. ಅದಾಗ್ಯೂ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಕಂದಾಯ ನಿರೀಕ್ಷಕ ಬಾಲು ಗವಸ, ಆರೋಗ್ಯ ನಿರೀಕ್ಷಕ ವಿಲಾಸ್ ಮೊದಲಾದವರು ಉಪಸ್ಥಿತರಿದ್ದರು.