ದಾಂಡೇಲಿ : ನಗರದ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಸಂಘದ ವ್ಯವಹಾರಗಳ ಲೆಕ್ಕಪತ್ರಗಳ ಮಾಹಿತಿ ನೀಡಬೇಕೆಂದು ಆಗ್ರಹಿಸಿ ಸಂಘದ ಕೆಲ ಶೇರುದಾರರು ನಡೆಸುತ್ತಿದ್ದ ಧರಣಿಯನ್ನು ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ನಂತರ ಹಿಂಪಡೆದುಕೊಳ್ಳಲಾಯಿತು.
ಸಂಘದ ವ್ಯವಹಾರಗಳ ಲೆಕ್ಕಪತ್ರಗಳ ಮಾಹಿತಿ ನೀಡಲು ಹಾಗೂ ಬೆಳೆ ಸಾಲ ನೀಡಲು ಆಗ್ರಹಿಸಿ ಸಂಘದ ಕೆಲ ಶೇರುದಾರರು ಗುರುವಾರ ಸಂಜೆಯಿಂದ ಪ್ರತಿಭಟನೆ ಪ್ರಾರಂಭಿಸಿದ್ದರು. ಶುಕ್ರವಾರ ಮತ್ತೆ ಪ್ರತಿಭಟನೆಯು ಮುಂದುವರೆದಿತ್ತು. ಪ್ರತಿಭಟನೆ ಮುಂದುವರಿದಿರುವುದನ್ನು ತಿಳಿದ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಾರ್ಯಾಲಯಕ್ಕೆ ಭೇಟಿ ನೀಡಿ ಪ್ರತಿಭಟನಾಕಾರದ ಜೊತೆ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯಕ್ಕೂ ಕರೆ ಮಾಡಿ ಅಲ್ಲಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಆನಂತರ ಪ್ರತಿಭಟನಾಕಾರರಿಗೆ ಈ ವಿಷಯದ ಕುರಿತಂತೆ ಸೋಮವಾರ ಬೆಳಗ್ಗೆ 11:30 ಗಂಟೆ ಸುಮಾರಿಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯದ ಅಧಿಕಾರಿಗಳು, ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಂಘದ ಮುಖ್ಯ ಕಾರ್ಯನಿರ್ವಾಹಕರು, ಕೆಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಮ್ಮುಖದಲ್ಲಿ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸೋಣ ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳಲಾಯಿತು.
ಅಂಬೇವಾಡಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ ಜಿ.ಈ, ಕಾಂಗ್ರೆಸ್ ಮುಖಂಡರುಗಳಾದ ಪರಶುರಾಮ ಎಚ್.ಬಿ, ದೇವೆಂದ್ರ ಹಂಶೆಟ್ಟರ್, ಪ್ರಕಾಶ ಮಿಶಾಲೆ, ದೇವೇಂದ್ರ ಅವರು ಸೇರಿದಂತೆ ಒಟ್ಟು ಒಂಬತ್ತು ಶೇರುದಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನಗರ ಠಾಣೆಯ ಮತ್ತು ಗ್ರಾಮೀಣ ಠಾಣೆಯ ಪೊಲೀಸರು ಸ್ಥಳದಲ್ಲಿದ್ದರು.