ಅಂಕೋಲಾ: ಕಾಡುಹಂದಿಯ ಮಾಂಸವನ್ನು ಸಾಗಾಟಾಪಡಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಂಕೋಲಾ ಅರಣ್ಯ ವಲಯದ ಸಿಬ್ಬಂದಿಗಳು ವಾಹನ ಸಮೇತ ಮಾಂಸವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಶನಿವಾರ ಬೆಳಗ್ಗೆ ತಾಲೂಕಿನ ಅಲಗೇರಿ ಗ್ರಾಮದ ಬಾಳೆಗುಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-63ನೇದರಲ್ಲಿ ಅಕ್ರಮವಾಗಿ ವಾಹನ ಸಂಖ್ಯೆ KA-05 MD 823ನೇದರಲ್ಲಿ ಕಾಡುಹಂದಿ ಮಾಂಸವನ್ನು ಸಾಗಣೆ ಮಾಡುತ್ತಿದ್ದ ಕುರಿತು ಮಾಹಿತಿ ದೊರೆತದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಕಾಡುಹಂದಿ ಮಾಂಸ ತುಂಬಿಕೊಂಡು ವಾಹನ ಚಾಲನೆ ಮಾಡುತ್ತಿದ್ದ ಸುಂಕಸಾಳದ ಕಳಸದಮಕ್ಕಿಯ ಅಕ್ಷಯ ಮಂಜುನಾಥ ಗಾಂವಕರನನ್ನು ವಶಕ್ಕೆ ಪಡೆಯಲಾಗಿದೆ. ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರಡಿ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದೆ. ಕಾಡುಹಂದಿಯು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್-IIರಲ್ಲಿ ಸಂರಕ್ಷಿಸಲ್ಪಟ್ಟ ಪ್ರಾಣಿಯಾಗಿರುತ್ತದೆ.
ಕಾರವಾರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ, ಅಂಕೋಲಾ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ವಲಯ ಅರಣ್ಯ ಅಧಿಕಾರಿ ಪ್ರಮೋದ ಬಿ. ನಾಯಕ, ಉಪ ವಲಯ ಅರಣ್ಯಾಧಿಕಾರಿಗಳಾದ ಜಗದೀಶ ದೇವಾಡಿಗ, ಭರತೇಶ ಬ. ವಾಲ್ಮೀಕಿ, ಗಸ್ತು ಅರಣ್ಯ ಪಾಲಕರಾದ ಯಮನಪ್ಪ ಬಿ ಹೆಚ್, ಮಂಜುನಾಥ ನಾಯಕ, ವಾಹನ ಚಾಲಕರಾದ ಶ್ರೀನಿವಾಸ ಹಾಗೂ ಜಗದೀಶರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.