ಸಿದ್ದಾಪುರ: ದೇಶದ ಕಾನೂನನ್ನು ಪಾಲಿಸುತ್ತ ವ್ಯವಹಾರ ನಡೆಸುತ್ತಿರುವ ಸಹಕಾರ ಸಂಸ್ಥೆಗಳಲ್ಲಿ ಕ್ಯಾಂಪ್ಕೊ ಕೂಡ ಪ್ರಮುಖವಾದದ್ದು. ಆ ಕಾರಣದಿಂದ ಪೈಪೋಟಿ ಜಾಸ್ತಿ ಇದೆ. ಸಂಸ್ಥೆ ಲಾಭವನ್ನು ಮಾತ್ರ ಪರಿಗಣಿಸದೇ ಬೆಳೆಗಾರರ ಹಿತದೃಷ್ಟಿಯನ್ನು ಮುಖ್ಯವಾಗಿರಿಸಿಕೊಂಡಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ನಡೆದ ಕ್ಯಾಂಪ್ಕೊ ಸಂಸ್ಥೆಯ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿ ತೆರಿಗೆ ಎನ್ನುವ ಗುಮ್ಮ ಎಲ್ಲ ಉದ್ಯಮಗಳನ್ನು ಕಾಡುವಂತೆ ನಮ್ಮ ಸಂಸ್ಥೆಗೂ ಬಾಧಿಸುತ್ತಿದೆ. ಜಿ.ಎಸ್.ಟಿ.ಯ ಕಾರಣದಿಂದ ವ್ಯಾಪಾರಿಗಳಂತೆ ನಮಗೆ ಬೆಳೆಗಾರರ ಮಹಸೂಲಿಗೆ ಹೆಚ್ಚಿನ ದರವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಕೇಂದ್ರ ವಿತ್ತ ಸಚಿವೆಯವರಿಗೆ ಅಡಕೆ ವಹಿವಾಟಿಗೆ ಶೇ.2 ತೆರಿಗೆ ನಿಗದಿಪಡಿಸಿ ಎಂದು ಬಜೆಟ್ ಪೂರ್ವದಲ್ಲೇ ಮನವಿ ಮಾಡಿದ್ದರೂ ಅವರು ಒಪ್ಪುತ್ತಿಲ್ಲ. ದೇಶದಲ್ಲಿ ಅಂದಾಜು 75 ಸಾವಿರ ಕೋಟಿ ರೂ.ಗಿಂತ ಹೆಚ್ಚು ಅಡಕೆ ವಹಿವಾಟು ನಡೆಯುತ್ತಿದ್ದು ಶೇ.2 ತೆರಿಗೆ ವಿಧಿಸಿದರೆ ನಮಗೂ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿತ್ತು. ಸುಮಾರು 700 ಕೋಟಿ ರೂ.ನಷ್ಟು ಜಿ.ಎಸ್.ಟಿ.ಕಟ್ಟುತ್ತಿರುವ ಕ್ಯಾಂಪ್ಕೊ ಮಾಡಿಕೊಂಡ ಮನವಿಗೆ ಕೇಂದ್ರ ಸರಕಾರ ಸ್ಪಂದಿಸಬೇಕಿತ್ತು. ದರ ಕಡಿಮೆಯಾದರೂ ಸಹಕಾರಿ ಸಂಸ್ಥೆಗಳಲ್ಲಿ ಬೆಳೆಗಾರರು ವ್ಯವಹರಿಸಿ. ಇದರಿಂದ ಬೆಳೆಗಾರರು ಬೇರೆ ಬೇರೆ ರೀತಿಯಲ್ಲಿ ನಷ್ಠ ಅನುಭವಿಸುವದು ತಪ್ಪುತ್ತದೆ ಎಂದರು.
ಬೆಳೆಗಾರರ ಪ್ರಶ್ನೆಗಳಿಗೆ ಉತ್ತರಿಸಿ ಅಡಕೆ ಸೇವನೆ ಆರೋಗ್ಯಕ್ಕೆ ಹಾನಿ ಎನ್ನುವಹೆಸರನ್ನು ಮೊದಲು ಹೋಗಲಾಡಿಸಬೇಕಿದೆ. ಆ ಬಗ್ಗೆ ವಿಜ್ಞಾನಿಗಳಿಂದ ಸಂಶೋಧನೆ ನಡೆಸಿ, ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸುವ, ಕ್ಯಾಂಪ್ಕೊ ಸಂಸ್ಥೆಯಿಂದ ಗೇರು ಬೀಜದ ರಪ್ತು ವ್ಯವಹಾರಕ್ಕೆ ಸಿದ್ಧತೆಗಳು ನಡೆದಿವೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಸೇರಿದಂತೆ ಕ್ಯಾಂಪ್ಕೊ ನಿರ್ದೇಶಕರುಗಳು, ವ್ಯವಸ್ಥಾಪಕರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಪ್ರಾಸ್ತಾವಿಕ ಮಾತನ್ನಾಡಿ ಸಂಸ್ಥೆಯ ಕಾರ್ಯಚಟುವಟಿಕೆಗಳ ವಿವರ ನೀಡಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕಿ ರೇಷ್ಮಾ ಮಲ್ಯ ಸದಸ್ಯರಿಗೆ ಸಂಸ್ಥೆಯ ವತಿಯಿಂದ ನೀಡಲಾಗುವ ಸೌಲಭ್ಯಗಳ ಕುರಿತು, ಕೃಷಿ ಅಧಿಕಾರಿ ಕೃಷ್ಣ ಸಂಸ್ಥೆಯಿಂದ ಉತ್ಪಾದಿಸಲಾಗುತ್ತಿರುವ ಸಾವಯವ ಗೊಬ್ಬರಗಳ ಕುರಿತು ಮಾಹಿತಿ ನೀಡಿದರು. ಕ್ಯಾಂಪ್ಕೊ ನಿರ್ದೇಶಕ ಶಂಭುಲಿಂಗ ಹೆಗಡೆ ನಿಡಗೋಡ ಸ್ವಾಗತಿಸಿದರು. ನಿರ್ದೇಶಕ ರಾಘವೇಂದ್ರ ಗರ್ತಿಕೆರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಟಿ.ಎಂ.ಎಸ್. ಸಂಸ್ಥೆಯ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.