ಸುಧೀರ ನಾಯರ್
ಬನವಾಸಿ: ಒಂದು ತೊಟ್ಟು ರಕ್ತ ಜೀವ ಉಳಿಸಬಲ್ಲುದು. ಇಂತಹ ರಕ್ತದ ಅಗತ್ಯತೆಯನ್ನು ಮನವರಿಕೆ ಮಾಡುವುದರೊಂದಿಗೆ ಜೀವ ಉಳಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಬನವಾಸಿಯ ಕದಂಬ ರಕ್ತನಿಧಿ ‘ವಾಟ್ಸ್‌ಆ್ಯಪ್ ಗ್ರೂಪ್’.
ತಾಲೂಕಿನಲ್ಲಿ ನಿತ್ಯ ಒಂದಿಲ್ಲೊಂದು ಕಡೆ ರಕ್ತದ ಅಗತ್ಯತೆ ಏರ್ಪಡುತ್ತಲೇ ಇರುತ್ತದೆ. ಕೆಲವೊಮ್ಮೆ ರಕ್ತದ ಅಗತ್ಯತೆ ಹೆಚ್ಚಾಗಿರುತ್ತದೆ. ಸಕಾಲಕ್ಕೆ ರಕ್ತ ಸಿಗದಿದ್ದರೆ ಜೀವಕ್ಕೆ ಹಾನಿಯಾದ ನಿದರ್ಶನಗಳಿಗೇನೂ ಕಡಿಮೆಯಿಲ್ಲ. ಅಂಥ ವೇಳೆ ಜಾತಿ -ಧರ್ಮ-ಕುಲ ಭೇದ ಮೀರಿ ರಕ್ತದಾನ ಮಾಡಿ ಜೀವ ಉಳಿಸುತ್ತಿರುವ ಅನೇಕರು ತಮಗರಿವಿಲ್ಲದೇ ದೊಡ್ಡ ಸೇವೆ ನೀಡುತ್ತಿದ್ದು, ಇದಕ್ಕೆಲ್ಲ ಕದಂಬ ರಕ್ತನಿಧಿ ‘ವಾಟ್ಸ್‌ಆ್ಯಪ್ ಗ್ರೂಪ್’ ಕೊಂಡಿಯಂತೆ ಕೆಲಸ ಮಾಡುತ್ತಿದೆ.
ರಕ್ತದ ಅಗತ್ಯ ಇರುವವರು ಒಂದು ಕರೆ ಮಾಡಿದರೆ ಸಾಕು, ಕೂಡಲೇ ಸ್ಪಂದಿಸುವ ಕದಂಬ ರಕ್ತನಿಧಿಯ ಸಂಚಾಲಕ ಇಕೋ ಮಂಜು ಹಾಗೂ ಸದಸ್ಯ ಸುಧೀರ ನಾಯರ್ ಆವರು ಅಗತ್ಯವಾದ ರಕ್ತ ಬೇಕಾಗಿರುವ ಸಂದೇಶ ಹಾಕುತ್ತಾರೆ. ಆ ಸಂದೇಶ ಕೆಲವೆಡೆ ಹರಿದಾಡಿ ಸಮೀಪದಲ್ಲಿರುವ ಯಾರಾದರೂ ಸ್ಪಂದಿಸುತ್ತಿದ್ದಾರೆ. ವಾಟ್ಸ್‌ಆ್ಯಪ್ ಸಂದೇಶ ನೋಡಿ ಬ್ಲಡ್ ಬ್ಯಾಂಕ್‌ಗೆ ತೆರಳಿ ರಕ್ತ ನೀಡಿ ಜೀವ ಉಳಿಸುತ್ತಿದ್ದಾರೆ. ಇವರ ಮಾಡುವ ಈ ಸೇವೆಗೆ ಜನ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ರಕ್ತದ ಅಗತ್ಯತೆ ಹೆಚ್ಚಲು ಮುಖ್ಯ ಕಾರಣ ಸಂಗ್ರಹ ಕೊರತೆ. ಎಲ್ಲ ಬ್ಯಾಂಕ್‌ಗಳಲ್ಲಿ ಹಣ ನೀಡಿ ರಕ್ತ ಪಡೆಯಬೇಕು. ಇಲ್ಲವೇ ಪರ್ಯಾಯವಾಗಿ ರಕ್ತ ನೀಡಿ ನಮಗೆ ಬೇಕಾದ ಗ್ರೂಪ್ ರಕ್ತ ಪಡೆಯಬೇಕು. ಕೆಲವೊಮ್ಮೆ ಓ ನೆಗೆಟಿವ್‌ನಂಥ ಅಪರೂಪದ ರಕ್ತ ಸಿಗುವುದು ತುಂಬಾ ವಿರಳ. ಅಂಥ ಕಡೆ ಹಣ ನೀಡಿದರೂ ಸಿಗುವುದು ಕಷ್ಟ. ಆಗ ನಮ್ಮ ರಕ್ತ ನೀಡಿ ಪರ್ಯಾಯ ರಕ್ತ ಪಡೆಯಬೇಕಿದೆ. ಇದು ಎಲ್ಲ ಆಸ್ಪತ್ರೆ ಬ್ಯಾಂಕ್‌ಗಳಲ್ಲಿ ನಡೆಯುತ್ತಿದೆ. ಇನ್ನು ಡೆಂಘೀ ಜ್ವರದಿಂದ ಬಳಲುವ ರೋಗಿಗಳಿಗೆ ಪ್ಲೇಟ್ಲೆಟ್ಸ್ ದಿಢೀರ್ ಕುಸಿತ ಕಾಣುವ ಸಾಧ್ಯತೆ ಇರುತ್ತದೆ. ಆ ಕ್ಷಣಕ್ಕೆ ತುರ್ತಾಗಿ ರಕ್ತ ಏರಿಸುವ ಸನ್ನಿವೇಶ ನಿರ್ಮಾಣವಾಗುತ್ತದೆ. ಅಂಥ ಕಡೆ ರಕ್ತದ ಅಗತ್ಯತೆ ತೀವ್ರವಾಗಿರುತ್ತದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವು ಬಾರಿ ಬನವಾಸಿಯ ಕದಂಬ ರಕ್ತನಿಧಿ ಅಮೂಲ್ಯ ಸೇವೆ ಸಲ್ಲಿಸಿದೆ.
ಕಳೆದ ಮೇ ಹಾಗೂ ಜೂನ್ ತಿಂಗಳಿನಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ರೋಗಿಗಳಿಗೆ ಸುಮಾರು ಐವತ್ತರಿಂದ ಆರವತ್ತು ಯುನಿಟ್ ರಕ್ತವನ್ನು ತುರ್ತಾಗಿ ಕಲ್ಪಿಸುವ ಮೂಲಕ ಮಾನವೀಯತೆ ತೋರಿದಿದ್ದಾರೆ.
ರಕ್ತದ ಅವಶ್ಯಕತೆ ಇರುವವರು ನಮಗೆ ಕರೆ ಮಾಡುತ್ತಾರೆ. ಕದಂಬ ರಕ್ತ ನಿಧಿ ಎಂಬ ವಾಟ್ಸಪ್ ಗ್ರೂಪ್ ಮೂಲಕ ಸಂದೇಶ ಕಳಿಸಿದ ಕೆಲ ಸಮಯದಲ್ಲಿ ರಕ್ತದಾನಿಗಳಿಂದ ಅಗತ್ಯವಿರುವ ರಕ್ತದ ವ್ಯವಸ್ಥೆ ಆಗುತ್ತದೆ. ಈ ಕಾರ್ಯದಿಂದ ಮನಸ್ಸಿಗೆ ತುಂಬಾ ಆನಂದವಾಗುತ್ತದೆ. ನಾನು ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡುತ್ತೆನೆ. ರಕ್ತದಾನದ ಈ ಪವಿತ್ರ ಕಾರ್ಯಕ್ಕೆ ರಕ್ತದಾನಿಗಳು ಸ್ಪಂದಿಸುತ್ತಿರುವುದು ಆನಂದ ನೀಡಿದೆ. –ಇಕೋ ಮಂಜು, ಬನವಾಸಿ ಕದಂಬ ರಕ್ತನಿಧಿ ಸಂಚಾಲಕ
ನಾನು 8 ಬಾರಿ ರಕ್ತದಾನ ಮಾಡಿದ್ದೆನೆ. ಪ್ರತಿಯೊಬ್ಬರೂ ರಕ್ತದಾನ ಮಾಡಲು ಸ್ವ ಇಚ್ಛೆಯಿಂದ ಮುಂದಾಗಬೇಕು. ರಕ್ತದಾನ ಮಾಡುವಂತೆ ಮತ್ತೊಬ್ಬರನ್ನು ಪ್ರೇರೆಪಿಸಬೇಕು.ಆಗ ಮಾತ್ರ ಜೀವ ಉಳಿಸುವ ಕಾರ್ಯ ಮಾಡಲು ಸಾಧ್ಯವಿದೆ. –ಸುಧೀರ ನಾಯರ್, ಬನವಾಸಿ ಕದಂಬ ರಕ್ತನಿಧಿ ಸದಸ್ಯ
ಇತ್ತೀಚೆಗೆ ನನ್ನ ಮಗ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ತುರ್ತಾಗಿ 5 ಯುನಿಟ್ ರಕ್ತದ ಅವಶ್ಯಕತೆಯಿತ್ತು. ಕದಂಬ ರಕ್ತನಿಧಿಯ ಸದಸ್ಯರನ್ನು ಸಂಪರ್ಕಿಸಿದ ಕೆಲವೇ ಗಂಟೆಯಲ್ಲಿ ರಕ್ತದಾನಿಗಳು ಆಗಮಿಸಿ ರಕ್ತ ನೀಡಿದ್ದಾರೆ. ಕದಂಬ ರಕ್ತನಿಧಿಯ ಈ ಕಾರ್ಯ ಮೆಚ್ಚುವಂತದ್ದಾಗಿದೆ.–ಶಶಿಕಲಾ ಬನವಾಸಿ ನಿವಾಸಿ