ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ವಿಮಲ್ ಹೋಂ ಸ್ಟೇ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಏಕಾಏಕಿ ಬಿಡಾಡಿ ದನವೊಂದು ನಡು ರಸ್ತೆಗೆ ಓಡಿ ಬಂದ ಪರಿಣಾಮವಾಗಿ ದ್ವಿ ಚಕ್ರ ವಾಹನವೊಂದು ಅಪಘಾತಕ್ಕೀಡಾಗಿ ಬಿಡಾಡಿ ದನ ಸ್ಥಳದಲ್ಲೆ ಸಾವನ್ನಪ್ಪಿದರೇ, ದ್ವಿಚಕ್ರ ವಾಹನ ಸವಾರನಿಗೆ ಗಾಯವಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಜೋಯಿಡಾ ತಾಲೂಕಿನ ರಾಮನಗರದ ನಿವಾಸಿ ಪದ್ದು ಬೀರು ಪೌವಣೆ (ವ.25) ಎಂಬಾತನೇ ಗಾಯಗೊಂಡ ಸವಾರನಾಗಿದ್ದಾನೆ. ಈತ ದಾಂಡೇಲಿಯಿಂದ ರಾಮನಗರಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ವಿಮಲ್ ಹೋಂ ಸ್ಟೇ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಏಕಾಏಕಿ ಬಿಡಾಡಿ ದನವೊಂದು ಅಡ್ಡ ಬಂದ ಪರಿಣಾಮವಾಗಿ ಅಪಘಾತ ಸಂಭವಿಸಿದೆ. ದನ ಸ್ಥಳದಲ್ಲೆ ಮೃತಪಟ್ಟಿದೆ. ಗಾಯಗೊಂಡ ಈತನನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರಲಾಗಿದೆ. ಘಟನಾ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐ ಶಿವಾನಂದ ನಾಮದಗಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.