ಶಿರಸಿ : ತಾಲೂಕಿನ ಯಡಳ್ಳಿ ಹಾಗೂ ಹೀಪನಳ್ಳಿಯ ಹವ್ಯಾಸಿ ಕಲಾವಿದರು ಸೇರಿಕೊಂಡು ಶ್ರೀ ಸೀತಾ ರಾಮಚಂದ್ರ ದೇವತಾ ಪ್ರಸನ್ನ, ಯಡಳ್ಳಿ ಎಂಬ ಶಿರೋನಾಮೆಯಡಿಯಲ್ಲಿ ಬಹಳ ಅಪರೂಪವೆಂಬಂತೆ ಸಂಘಟಿಸಿದ್ದ ರಾಮಾಯಣ ಹಿನ್ನೆಲೆ ಹೊಂದಿದ `ಅಯೋಧ್ಯಾ ವಿಯೋಗ’ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಲಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಅಮೃತಾ ಹೆಗಡೆ ರಚಿಸಿದ ಸಾಹಿತ್ಯವನ್ನು ರೇಖಾ ಹೆಗಡೆ ನಿರ್ದೇಶನದಲ್ಲಿ ಒಟ್ಟೂ 22 ಕಲಾವಿದರು ಪಾಲ್ಗೊಂಡು ಎರಡೂವರೆ ತಾಸಿಗೂ ಮಿಕ್ಕಿದ ಪೌರಾಣಿಕ ನಾಟಕ ಶಿರಸಿ ನೆಮ್ಮದಿ ರಂಗಧಾಮದಲ್ಲಿ ಯಾವುದೇ ಭಾಷಣ ಸಭೆಗಳಿಲ್ಲದೇ, ಅತ್ಯಂತ ಸುಂದರವಾಗಿ ಪ್ರದರ್ಶಿತಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
ಅಯೋಧ್ಯಾ ಕಥಾ ಹಂದರದಲ್ಲಿ ಬರುವ ಶ್ರೀರಾಮನಿಗೆ ಪಟ್ಟಾಭಿಷೇಕ ನಿರ್ಧರಿಸುವುದರಿಂದ ಆರಂಭಗೊಂಡ ನಾಟಕದಲ್ಲಿ ಬರುವ ಪಾತ್ರದಲ್ಲಿ ಕೈಕೇಯಿ ಮನದಲ್ಲಿ ಮಂಥರೆ ಎಂಬ ಮಾಯಾದಾಸಿ ಮನಸ್ಸನ್ನು ಕಲಕಿ ಪಟ್ಟಾಭಿಷೇಕ ನಿಲ್ಲಿಸುವುದು ಹಾಗೂ ಶ್ರೀರಾಮ ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ತೆರಳುವುದು ಇದೆಲ್ಲವನ್ನು ನೋಡಲಾಗದ ಇಡೀ ಅಯೋಧ್ಯೆ ವಿಚಲಿತವಾಗುತ್ತ, ದಶರಥ ವಿಯೋಗವಾಗುವುದನ್ನು ನಾಟಕದ ಮುಖ್ಯ ಕಥಾ ಭಾಗವಾಗಿ ಆಯ್ದುಕೊಂಡ ಕಲಾವಿದರು, ಪ್ರತೀ ಹಂತದಲ್ಲೂ ಮನೋಜ್ಞವಾಗಿ ಆಭಿನಯಿಸಿದ್ದಾರೆ.
ಇಂದು ಪೌರಾಣಿಕ ಪ್ರದರ್ಶನ ಮಾಡುವ ಕೆಲಸ ಸುಲಭದ್ದಲ್ಲ. ಹಾಗೂ ಪೌರಾಣಿಕಕ್ಕೆ ಅದರದ್ದೇ ಆದ ಮಹತ್ವವಿದೆ. ಅದೆಲ್ಲವನ್ನೂ ಅರಿತ ಎಲ್ಲ ಹವ್ಯಾಸಿ ಕಲಾವಿದರು ಶ್ರಮವಹಿಸಿ, ಅಭಿನಯಿಸುತ್ತ, ಕಿಕ್ಕಿರಿದ ಕಲಾಭಿಮಾನಿಗಳ ಜನಮಾನಸದಲ್ಲಿ ನಾಟಕ ನೆಲೆಯೂರವಂತೆ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಪ್ರತಿಯೊಂದು ಕಲಾವಿದರು ಆಯಾ ಪಾತ್ರಕ್ಕೆ ಜೀವ ತುಂಬಿದ್ದು, ನಾಟಕ ಪ್ರದರ್ಶನಕ್ಕೆ ಬೇಕಾದ ಸಂದರ್ಭಕ್ಕನುಗುಣವಾಗಿ ನರ್ತನ, ಹಿನ್ನೆಲೆಯ ಸುಮಧುರವಾದ ಸಂಗೀತ ಹಾಗೂ ವಾದನಗಳು ಕೂಡಾ ಹಂತ ಹಂತಕ್ಕೆ ಹಿತವೆನಿಸುತ್ತಾ ಒಟ್ಟಾರೆ ಎರಡೂವರೆ ತಾಸುಗಳ ಕಾಲ ಕಳೆದದ್ದೇ ಅರಿವಿಗೆ ಬರುವುದಿಲ್ಲ. ಅಷ್ಟು ಸುಂದರವಾಗಿ ನಾಟಕ ಪ್ರದರ್ಶನಗೊಂಡಿದೆ.
ಯಡಳ್ಳಿ, ಹೀಪನಳ್ಳಿ ಹವ್ಯಾಸಿ ಕಲಾವಿದರು ಕಳೆದ 12 ವರ್ಷಗಳಿಂದ ಬೇರೆ ಬೇರೆ ಪೌರಾಣಿಕ ನಾಟಕಗಳನ್ನು ಕೂಡಾ ಪ್ರದರ್ಶನ ಮಾಡಿದ್ದು, ಇದು ಗ್ರಾಮೀಣ ಭಾಗವಾದ ಯಡಳ್ಳಿಯಲ್ಲಿ ನಡೆಯುತ್ತಿತ್ತು. ಪ್ರಸ್ತುತ ವರ್ಷ ಶಿರಸಿ ರಂಗಧಾಮದಲ್ಲಿ ಪ್ರದರ್ಶನ ಮಾಡಿ ಜನಮನ್ನಣೆಗೆ ಪಾತ್ರವಾಗಿದ್ದಾರೆ.
ನಾಟಕ ನಿರ್ದೇಶನ ಮಾಡಿದ ಮಂಥರೆ ಪಾತ್ರಧಾರಿ ರೇಖಾ ಹೆಗಡೆ ಹಾಗೂ ಕೈಕೇಯಿ ಪಾತ್ರದಲ್ಲಿ ಭಾಗವಹಿಸಿದ್ದ ಗಾಯಿತ್ರಿ ಹೆಗಡೆ ಮತ್ತು ಸಂದರ್ಭಕ್ಕನುಗುಣವಾದ ನರ್ತಕಿಯರ ಪಾತ್ರದಲ್ಲಿ ಶಿಲ್ಪಾ ಹೆಗಡೆ, ಆಶಾ ಹೆಗಡೆ ಇಡೀ ನಾಟಕವನ್ನು ಸರಿದೂಗಿಸುವ ಶ್ರಮ ವಹಿಸಿದ್ದು ಇಲ್ಲಿ ಆರು ವರ್ಷದ ಮಕ್ಕಳಿಂದ ಅರವತ್ತೈದು ವರ್ಷದವರೆಗಿನ ಕಲಾವಿದರು ಇರುವುದು ನಾಟಕದ ವಿಶೇಷತೆಯಾಗಿದೆ.
ದಶರಥನ ಪಾತ್ರದಲ್ಲಿ ಪ್ರದೀಪ ಹೆಗಡೆ, ವಸಿಷ್ಠ ಚೇತನ, ಸುಮಂತ್ರ ಶ್ಯಾಮಲಾ, ಕೌಸಲ್ಯಾ ರಾಜೇಶ್ವರಿ, ಸುಮಿತ್ರೆ ಸುಶೀಲಾ, ಶ್ರೀರಾಮ ಶ್ರೀರಾಮ ಹೆಗಡೆ, ಲಕ್ಷ್ಮಣ ಸಂದೇಶ, ಸೀತೆ ಸಿರಿ, ಊರ್ಮಿಳೆ ಪೂಜಾ, ಸೂತ್ರಧಾರಿಗಳಾಗಿ ಶಿಲ್ಪಾ ಮತ್ತು ಆಶಾ, ಡಂಗೂರ ಸ್ವರೂಪ, ಊರ ನಾಗರಿಕರಾಗಿ ಶ್ರೀಶ್ಯಾಮ, ಓಂಸ್ವರೂಪ, ಭೂಷಿತ್ ಅವರು ಅಭಿನಯಿಸಿದರೆ, ಹಿನ್ನೆಲೆ ಗಾಯನದಲ್ಲಿ ಪಾರ್ವತಿ ಹೆಗಡೆ, ಸುಮಾ ಹೆಗಡೆ, ಭವ್ಯ ಹೆಗಡೆ ಹಾಗೂ ಹಾರ್ಮೋನಿಯಂನಲ್ಲಿ ಅನಂತ ಹೆಗಡೆ ಯಡಳ್ಳಿ ಮತ್ತು ತಬಲಾದಲ್ಲಿ ಸಿ.ಎ.ಗುರುಪ್ರಸಾದ ಹೆಗಡೆ ಪಾಲ್ಗೊಂಡರು.
ಅಯೋಧ್ಯಾ ವಿಯೋಗ ನಾಟಕ ಪ್ರದರ್ಶನವನ್ನು ವಿ.ಪಿ. ಹೆಗಡೆ ವೈಶಾಲಿ, ಕೃಷ್ಣ ಹೆಗಡೆ ಅಬ್ರಿ ಹೀಪನಳ್ಳಿ, ಅನಂತ ಹೆಗಡೆ ಯಡಳ್ಳಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರೆ ಗಾಯತ್ರಿ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.