ಶಿರಸಿ: ಇತ್ತೀಚೆಗೆ ಹಾಲು ಹೊಂಡ ಬಡಾವಣೆ ಗಾಯತ್ರಿ ಗೆಳೆಯರ ಬಳಗದಲ್ಲಿ ಯಕ್ಷ ಗೆಜ್ಜೆ ಶಿರಸಿ ಇವರಿಂದ ‘ಮನೆ ಮನೆಯಲ್ಲಿ ಮಾಸಕ್ಕೊಂದು ತಾಳಮದ್ದಲೆ’ ಕಾರ್ಯಕ್ರಮ ಅರ್ಥಪೂರ್ಣವಾದ ಅರ್ಥಗಾರಿಕೆಯಿಂದ ಸಂಪನ್ನಗೊಂಡಿತು.
ಕಾರ್ಯಕ್ರಮದ ಆರಂಭದಲ್ಲಿ ಬಳಗದ ಪ್ರೊಫೆಸರ್ ಡಿ. ಎಂ. ಭಟ್ ಕುಳುವೆಯವರು ಎಲ್ಲರನ್ನೂ ಗೌರವ ಪೂರ್ವಕವಾಗಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಎಲ್ಲರೂ ಬದುಕಿನಲ್ಲಿ ಕಲೆಯನ್ನು ಸಂಭ್ರಮಿಸಿ ಸಾಕ್ಷೀಕರಿಸಿಕೊಳ್ಳಬೇಕೆಂದು ಕರೆಕೊಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು. ತಾಳಮದ್ದಲೆ ತಂಡದ ಮುಖ್ಯಸ್ಥೆಯಾದ ನಿರ್ಮಲಾ ಹೆಗಡೆ ಗೋಳಿಕೊಪ್ಪ ಕಲಾವಿದರನ್ನು ಪರಿಚಯಿಸಿದರು ಹಾಗೂ ‘ಅತಿಕಾಯ ಮೋಕ್ಷ’ ತಾಳಮದ್ದಲೆ ಪ್ರಸಂಗದ ಕುರಿತಾಗಿ ಹೇಳಿದರು. ಈ ತಾಳಮದ್ದಲೆಯಲ್ಲಿ ಭಾಗವತರಾಗಿ ಗಜಾನನ ಭಟ್ ತುಳಗೇರಿ, ಮದ್ದಲೆವಾದಕರಾಗಿ ಮಂಜುನಾಥ ಹೆಗಡೆ ಕಂಚಿಮನೆ ಆಗಮಿಸಿ ಯಕ್ಷಪ್ರಿಯರನ್ನು ಆನಂದ ತುಂದಿಲರನ್ನಾಗಿ ಮಾಡಿದರು. ರಾವಣನ ಪಾತ್ರದಲ್ಲಿ ಲತಾ ಗಿರಿಧರ್, ರಾಮನಾಗಿ ಸಂಧ್ಯಾ ಹೆಗಡೆ, ನರಹಂತಕ ದೇವ ಹಂತಕನಾಗಿ ಕವಯತ್ರಿ ಸಿಂಧು ಚಂದ್ರ ಹೆಗಡೆ, ವಿಭೀಷಣನ ಪಾತ್ರದಲ್ಲಿ ರೋಹಿಣಿ ಹೆಗಡೆ, ಅತಿಕಾಯನಾಗಿ ನಿರ್ಮಲಾ ಹೆಗಡೆ ಗೋಳಿಕಪ್ಪ, ಅಂಗದನಾಗಿ ಭವಾನಿ ಭಟ್ಟ, ಲಕ್ಷ್ಮಣನ ಪಾತ್ರದಲ್ಲಿ ಸ್ಮಿತಾ ಭಟ್ಟ, ಧ್ಯಾನ ಲಕ್ಷ್ಮಿಯಾಗಿ ರೇಣುಕಾ ನಾಗರಾಜ್, ದೂತನಾಗಿ ವಿಮಲಾ ಭಾಗವತ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದರು.
ಅತಿಕಾಯ ಮೋಕ್ಷ ತಾಳಮದ್ದಲೆಯಲ್ಲಿ ಹಿರಿಕಿರಿಯ ಅರ್ಥದಾರಿಗಳು ಭಾಗವಹಿಸಿದ್ದರು. ಕಲಾವಿದರೆಲ್ಲರೂ ತಮ್ಮ ತಮ್ಮ ಅರ್ಥಗಾರಿಕೆಯಿಂದ ಯಕ್ಷ ಪ್ರೇಮಿಗಳ ಹೃದಯವನ್ನು ಗೆದ್ದರು, ಭವಿಷ್ಯದ ಭರವಸೆಯ ಬೆಳಕಿನಲ್ಲಿ, ಕಲಾವಿದರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ತಾಳಮದ್ದಲೆ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದರು.
ನಿವೃತ್ತ ಶಿಕ್ಷಕ ನಾಗೇಂದ್ರ ಮಾರ್ಕಾಂಡೆಯವರು, ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಾತೆಯಂದಿರು ತಮ್ಮ ಮಕ್ಕಳಿಗೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳ ಬಗೆಗೆ ಹೇಳಿ ಸಂಸ್ಕಾರ ನೀಡಿ, ಈ ಅದ್ಭುತ ಕಲೆಯ ಶ್ರೇಯಸ್ಸಿಗೆ ಕಾರಣರಾಗಬೇಕೆಂದು ಹೇಳಿ, ಎಲ್ಲರಿಗೂ ಆಭಾರಮನ್ನಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗುರುಪಾದ ಹೆಗಡೆ, ನಾಗರಾಜ, ಪಿ ಎಸ್ ಹೆಗಡೆ, ಕಮಲಾ ಹೆಗಡೆ, ಬೈಲಕೇರಿ ದಂಪತಿಗಳು, ಎಂ.ಎಸ್.ಹೆಗಡೆ ದಂಪತಿಗಳು, ಚಂದ್ರಶೇಖರ್ ಹೆಗಡೆ, ಎಂ.ಆರ್.ಹೆಗಡೆ ಕಾನಗೋಡ,ಮಂಜುನಾಥ ಗೋಪನಮನೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.