ಶಿರಸಿ: ಮಕ್ಕಳು ಸಂಸ್ಕಾರ ಮತ್ತು ಸಂಸ್ಕೃತಿ ಅರಿತರೆ ಭವಿಷ್ಯದ ಬದುಕು ನೆಮ್ಮದಿಯಿಂದ ಕೂಡಿರುತ್ತದೆ ಎಂದು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.
ಅವರು ತಾಲೂಕಿನ ಕೊಳಗಿಬೀಸ್ ಮಾರುತಿ ದೇವಸ್ಥಾನದಲ್ಲಿ ನಡೆಸಲಾಗುತ್ತಿರುವ ವೇದಾಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ಸೋಮವಾರ ಮಾತನಾಡಿದರು. ವೇದ, ಪುರಾಣಗಳ ತಿಳುವಳಿಕೆ ಎಲ್ಲರಿಗೂ ಇರಬೇಕು. ಉಪನೀತರಾದವರು ಶ್ರದ್ಧೆಯಿಂದ ಸಂಧ್ಯಾವಂದನೆ, ದೇವರ ಪೂಜೆ ಮಂತ್ರ ಕಲಿತು ನಿತ್ಯವೂ ಅನುಷ್ಟಾನ ಮಾಡಿದರೆ ಏಕಾಗ್ರತೆ ಹೆಚ್ಚುತ್ತದೆ ಎಂದರು. ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪ್ರಮುಖ ಆರ್.ಎಸ್.ಹೆಗಡೆ ಭೈರುಂಬೆ, ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಇಂಥ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು. ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ವೈಶಾಲಿ ವಿ.ಪಿ.ಹೆಗಡೆ ಮಾತನಾಡಿ, ಎಳೆಯ ವಯಸ್ಸಿನಲ್ಲೇ ನಮ್ಮ ನೆಲದ ಸಂಸ್ಕೃತಿ ಅರಿಯುವ ಕಾರ್ಯ ಆಗಬೇಕು. ಅದಕ್ಕೆ ಇಂಥ ಶಿಬಿರಗಳು ಪೂರಕ, ಪ್ರೇರಕ ಎಂದರು.
ಈ ವೇಳೆ ವಿದ್ವಾಂಸರಾದ ಜಿ.ಎನ್.ಭಟ್ಟ ಹರಿಗಾರ, ಕುಮಾರ ಭಟ್ಟ ಕೊಳಗಿಬೀಸ್, ಎಂ.ಎಂ.ಭಟ್ಟ ಕಾರೆಕೊಪ್ಪ, ದೇವಸ್ಥಾನ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ವಿನಯ ಭಟ್ಟ, ಶ್ರೀಧರ ಭಟ್ಟ ಕೊಳಗಿಬೀಸ್ ಇತರರು ಇದ್ದರು.