ಹಳಿಯಾಳ: ಬಿಜೆಪಿಗರಿಗೆ ಜಾತ್ಯಾತೀತ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲ. ಹಿಂದು, ಮುಸ್ಲಿಂ ಸೇರಿದಂತೆ ಯಾವುದೇ ಧರ್ಮದವರೂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಕರೆನೀಡಿದರು.
ಮುರ್ಕವಾಡ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ವಿಚಾರಧಾರೆ ಬಿಜೆಪಿಗರಿಗಿಲ್ಲ. ಅದರಿಂದಲೇ ದೇಶದ ವಿವಿಧೆಡೆ ಕೋಮುಗಲಭೆಗಳಾಗುತ್ತಿವೆ. ಬಿಜೆಪಿ ಉಚ್ಛಾಟನೆಯಾಗಲು ಅವರಿಗೆ ಹೀನಾಯ ಸೋಲಾಗಬೇಕು, ಕಾಂಗ್ರೆಸ್ ಗೆಲ್ಲಬೇಕು ಎಂದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ೩೦ ವರ್ಷ ಬಿಜೆಪಿ ಸಂಸದರನ್ನ ಆಯ್ಕೆ ಮಾಡಿದಿರಿ. ಈ ಬಾರಿ ಒಂದು ಅವಕಾಶ ನಿಮ್ಮ ಮಗಳಾದ ನನಗೆ ನೀಡಬೇಕು. ಬಿಜೆಪಿ ಅಭ್ಯರ್ಥಿ ಕಾಗೇರಿ ದೇಶಕ್ಕಾಗಿ ಮತ ನೀಡಿ ಎನ್ನುತ್ತಾರೆ. ಮನೆಯಿಂದಲೇ ದೇಶ ಕಟ್ಟಬೇಕು. ಮನೆ, ಊರಿನ ಸಮಸ್ಯೆಗಳೇ ಬಗೆಹರಿಯದಿದ್ದಾಗ ದೇಶದ ಸಮಸ್ಯೆ ಬಗೆಹರಿಸುವುದಾದರೂ ಹೇಗೆ? ಕರ್ನಾಟಕದ ೨೬ ಬಿಜೆಪಿ ಸಂಸದರು ಬಡವರು, ರೈತರು, ಮಹಿಳೆಯರು, ಯುವಕರು, ಜಿಎಸ್‌ಟಿ ಸಮಸ್ಯೆ ಬಗ್ಗೆ ಒಮ್ಮೆಯೂ ಸಂಸತ್‌ನಲ್ಲಿ ಮಾತನಾಡಿಲ್ಲ. ಅಂಥ ಬಿಜೆಪಿಗೆ ಮತ ಹಾಕಬೇಕಾ? ೧೦ ವರ್ಷಗಳಿಂದ ಬಡವರ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟವಾಗಿ ಈ ಚುನಾವಣೆ ನಡೆಯುತ್ತಿದೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ಹಳ್ಳಿಯನ್ನೂ ಸರಿಯಾಗಿ ನೋಡಿಲ್ಲ. ಯಾರ ಸೇವೆ ಮಾಡಲು ಅವರು ಸಂಸದರಾಗಬೇಕು? ಮೇಲೆ ನೋಡಿ ಮತ ಹಾಕಬೇಕು ಎನ್ನುವುದಾದರೆ ಪ್ರಧಾನಿಯವರನ್ನೇ ತಂದು ಇಲ್ಲಿ ನಿಲ್ಲಿಸಿ, ನೀವ್ಯಾಕೆ ಚುನಾವಣೆಗಾಗಿ ಕಷ್ಟಪಡುತ್ತೀರಿ ಎಂದು ವ್ಯಂಗ್ಯವಾಡಿದರು.
ಆರು ಬಾರಿ ಶಾಸಕರಾದರೂ ಕಾಗೇರಿಯವರು ಅಂಕೋಲಾ ಜನರ ಕಷ್ಟಗಳನ್ನು ಕೇಳಿಲ್ಲ, ಶಿರಸಿ ಜನರ ನೋವಿನಲ್ಲೂ ಭಾಗಿಯಾಗಿಲ್ಲ. ಈಗ ಮತ್ತೆ ಲೋಕಸಭಾ ಚುನಾವಣೆಗೆ ಯಾರ ಸೇವೆ ಮಾಡಲು ಬಂದಿದ್ದಾರೋ ಗೊತ್ತಿಲ್ಲ. ಕ್ಷೇತ್ರದಲ್ಲಿ ಅವರ ಪಕ್ಷದ ಶಾಸಕರುಗಳೇ ಅವರೊಂದಿಗೆ ಇಲ್ಲ. ಆದರೂ ಕಾಗೇರಿಯವರು ಗೆಲುವಿನ ಸರ್ಟಿಫಿಕೇಟ್ ನಮ್ಮ ಕೈಯ್ಯಲ್ಲಿ ಇದೆ, ಸಹಿ ಮಾತ್ರ ಬಾಕಿ ಇದೆ ಎನ್ನುತ್ತಿದ್ದಾರೆ. ಅಷ್ಟೊಂದು ಆತ್ಮವಿಶ್ವಾಸ ಹೊಂದಿರುವ ಕಾಗೇರಿಯವರು ಪ್ರಚಾರಕ್ಕೆ ಏಕೆ ಹೋಗುತ್ತಿದ್ದಾರೆ, ಸುಮ್ಮನೆ ಕೂರಬಹುದಿತ್ತಲ್ಲ ಎಂದು ವ್ಯಂಗ್ಯವಾಡಿದರು.
ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕೆಪಿಸಿಸಿ ಸದಸ್ಯ ಸುಭಾಷ್ ಕೊರ್ವೇಕರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ.ಚೌಗಲೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಕುಮಾರ್ ಜಾವ್ಲೇಕರ್, ಜಿ.ಪಂ ಮಾಜಿ ಸದಸ್ಯ ಸಂಜು ಮಿಶಾಲಿ, ಸೇವಾದಳದ ತಾಲೂಕಾಧ್ಯಕ್ಷ ಪ್ರಕಾಶ ಪಾಕ್ರಿ, ಮುಖಂಡರಾದ ದೇಮಾನಿ ಶೇರೋಜಿ, ಶಂಕರ ಬೆಳಗಾಂವ್ಕರ್, ನಂದಾ ಕೊರ್ವೇಕರ್, ಖಾನಾಪುರದ ರಿಯಾಜ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ಪಕ್ಷ ಸೇರ್ಪಡೆ….
ಕಾರ್ಯಕ್ರಮದಲ್ಲಿ ಬಾಳು ಜಾಧವ್, ಧರ್ಮರಾಜ್ ಪಾಟೀಲ್, ಮನೋಹರ್ ಕಲಾಲ್, ಸಂತೋಷ್ ಕುಂಬಾರ, ಲಕ್ಷ್ಮಣ ಜಾಧವ್, ಅಬ್ದುಲ್ ಅಜೀಜ್, ರಾಜಣಬಿ, ಮಂಜು ಚೌಹಾಣ್, ಮಂಜುನಾಥ ಹೊರಂಬಳಿ, ಬಸವರಾಜ ಗೌಡ, ಸತೀಶ್, ಧರ್ಮರಾಜ್, ಸಂತೋಷ್ ಮುಂತಾದವರು ಜೆಡಿಎಸ್ ಹಾಗೂ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡರು. ಶಾಸಕ ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಎಲ್ಲರಿಗೂ ಕಾಂಗ್ರೆಸ್ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ನಮ್ಮ ಕಾಂಗ್ರೆಸ್ ಟೀಂ ಇಂಡಿಯಾದಂತೆ. ದೇಶಪಾಂಡೆ ಹಾಗೂ ಮಂಕಾಳ ವೈದ್ಯರು ಇಂಡಿಯಾ ಟೀಂನ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ಇದ್ದಂತೆ. ಬಿಜೆಪಿಯವರ ಯಾವ ಬಾಲ್‌ಗೂ ಇವರಿಬ್ಬರೆ ಸಾಕು. ೫೬ ಇಂಚಿನ ಎದೆಯಲ್ಲ, ಜನರಿಗೆ ಸ್ಪಂದಿಸುವ ಎರಡಿಂಚಿನ ಹೃದಯ ಮುಖ್ಯ.
- ಡಾ.ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಅಭ್ಯರ್ಥಿ