Slide
Slide
Slide
previous arrow
next arrow

ಅಭಿವೃದ್ಧಿಯ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಬನ್ನಿ: ಬಿಜೆಪಿಗರಿಗೆ ಡಾ.ಅಂಜಲಿ ಸವಾಲು

300x250 AD

ಹಳಿಯಾಳ: ನನ್ನ ಐದು ವರ್ಷ, ಬಿಜೆಪಿ ಅಭ್ಯರ್ಥಿಯ ಆರು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆ ಮಾಡೋಣ, ಬಿಜೆಪಿಗರೇ ಬನ್ನಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಬಹಿರಂಗವಾಗಿ ಸವಾಲೆಸೆದಿದ್ದಾರೆ.

ಅಂಬಿಕಾನಗರ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಖಾನಾಪುರದಲ್ಲಿ ಐದು ವರ್ಷ ನಾನೇನು ಅಭಿವೃದ್ಧಿ ಮಾಡಿದ್ದೀನಿ, ಆರು ಬಾರಿ ಆಯ್ಕೆಯಾಗಿ ಏನು ಮಾಡಿದ್ದಾರೆಂದು ಬಿಜೆಪಿ ಅಭ್ಯರ್ಥಿ ಕಾಗೇರಿಯವರು ತೋರಿಸಲಿ. ಮೂರು ದಿನ ಶಿರಸಿಯಲ್ಲೇ ಇರುವೆ; ದಿನ, ಸಮಯ ನೀವು ನಿಗದಿ ಮಾಡಿ, ಚರ್ಚೆಗೆ ಸಿದ್ಧಳಿದ್ದೇನೆ. ನಾನಲ್ಲ, ನನ್ನ ಖಾನಾಪುರದ ಜನರೇ ಬಂದು ನಿಮಗೆ ಉತ್ತರ ನೀಡುತ್ತಾರೆ. ಜಿಲ್ಲೆಯ ಜನ ಕೂಡ ಅವರನ್ನ ಪ್ರಶ್ನಿಸಬೇಕು. ಪ್ರಶ್ನಿಸುವ ಹಕ್ಕು ಸಂವಿಧಾನದಲ್ಲೇ ಇದೆ. ಬಿಜೆಪಿಗರು ಸಂವಿಧಾನ ಓದದಿರುವುದಕ್ಕೆ ಹೇಗೇಗೋ ಮಾತನಾಡುತ್ತಿದ್ದಾರೆ ಎಂದರು.

ಇದು ದೇಶದ ಚುನಾವಣೆ, ಅಂಜಲಿ ರಸ್ತೆ,‌ ನೀರು, ಚರಂಡಿ ಎಂದು ಕೂತಿದ್ದಾರೆ. ಇದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲ ಎಂದು ಬಿಜೆಪಿ ಅಭ್ಯರ್ಥಿ ಕಾಗೇರಿ ಹೇಳುತ್ತಾರೆ. ದೇಶದೆಲ್ಲೆಡೆ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿ, ಅದನ್ನ ವಾಪಸ್ಸು ಕೇಳಿದಾಗ ಕೊಡದೆ ಅನ್ಯಾಯ ಮಾಡಿದವರು ಕೇಂದ್ರದ ಬಿಜೆಪಿ ಸರ್ಕಾರ. ನಮ್ಮ ಮಕ್ಕಳಿಗಾಗಿ, ನಮ್ಮ ಕುಟುಂಬ- ಸಂಸಾರಕ್ಕಾಗಿ ಕಾಂಗ್ರೆಸ್‌ಗೆ ಮತ ಹಾಕಬೇಕು. ಸಿದ್ದಿ ಸಮುದಾಯವನ್ನ ಎಸ್ಟಿಗೆ ಸೇರಿಸಿದ್ದು, ಅವರಿಗೆ ಪೌಷ್ಟಿಕ ಆಹಾರದ ಕಿಟ್ ನೀಡಿದ್ದು ಕಾಂಗ್ರೆಸ್. ಅನ್ನದಾತರು ವರ್ಷಗಟ್ಟಲೆ ದೆಹಲಿಯಲ್ಲಿ ಪ್ರತಿಭಟಿಸಿದರೂ ಪ್ರಧಾನಿಯಾಗಲಿ, ಒಬ್ಬನೇ ಒಬ್ಬ ಮಂತ್ರಿಯಾಗಲಿ ಭೇಟಿ ಮಾಡಿಲ್ಲ. ಬದಲಿಗೆ ಅವರನ್ನ ಖಲಿಸ್ತಾನಿ ಭಯೋತ್ಪಾದಕರೆಂದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಪಕ್ಷ ಕಾಂಗ್ರೆಸ್. ದೇಶದ ಬಾವುಟ ಹಿಡಿಯಲೂ ಬಿಜೆಪಿಗರಿಗೆ ಆಗಲ್ಲ. ಅದಾನಿ- ಅಂಬಾನಿಯ ನೂರಾರು ಕೋಟಿ ಸಾಲ ಮನ್ನಾ ಮಾಡಲು ಇವರಿಗೆ ಆಗತ್ತೆ, ಅನ್ನದಾತರ ಸಾಲ ಮನ್ನಾ ಮಾಡಲು ಆಗಲ್ಲ. ಅತಿಕ್ರಮಣದಾರರ ಬಗ್ಗೆ ಕೇಂದ್ರದಲ್ಲಿ ಮಾತನಾಡಬೇಕೆಂದರೆ ಮತ ನೀಡಿ ಸಂಸತ್‌ಗೆ ಕಳುಹಿಸಬೇಕಿದೆ. ಮೊದಲ ಅಧಿವೇಶನದಲ್ಲೇ ಈ ಬಗ್ಗೆ ಧ್ವನಿ ಎತ್ತುತ್ತೇನೆ. ಕಾಂಗ್ರೆಸ್ ಇವತ್ತು, ನಿನ್ನೆ ಹುಟ್ಟಿದ ಪಕ್ಷವಲ್ಲ. ಬ್ರಿಟಿಷರನ್ನೇ ಓಡಿಸಿದ ಪಕ್ಷ. ಬಿಜೆಪಿಗರಿಗೂ ದಾರಿ ತೋರಿಸುತ್ತೇವೆ, ಅದಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದರು.

ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್‌ ಮಾತನಾಡಿ, ತಳಮಟ್ಟದ ಕಾರ್ಯಕರ್ತರು ಕೆಲಸ ಮಾಡಬೇಕು. ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಮುಟ್ಟಿಸಬೇಕು. ಮೋದಿಯವರ ಸುಳ್ಳು ಗ್ಯಾರಂಟಿಯಂತೆ ನಮ್ಮ ಸರ್ಕಾರವಲ್ಲ. ನಮ್ಮದು ನುಡಿದಂತೆ ನಡೆವ ಸರ್ಕಾರ.‌ ಮೋದಿ ಸರ್ಕಾರ ರೈತರಿಗಾಗಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಬ್ಲಾಕ್ ಕಾಂಗ್ರೆಸ್ ವಕ್ತಾರ ಉಮೇಶ್ ಬೋಳಶೆಟ್ಟಿ, ಯಾರೇ ಒಬ್ಬರಿಂದ ಪಕ್ಷವಾಗಲ್ಲ, ಯಾವುದೇ ಒಂದು ಜಾತಿಯಿಂದ ಧರ್ಮವಾಗಲ್ಲ. ನಮ್ಮದು ಛತ್ರಪತಿ ಶಿವಾಜಿಯವರಿಂದ ಸ್ಥಾಪಿತವಾದ ಹಿಂದವೀ ಸ್ವರಾಜ್, ಅವರದು ಹಿಂದೂ ಸಮಾಜ್. ಗೃಹಲಕ್ಷ್ಮಿಯಿಂದ ಹೆಣ್ಣುಮಕ್ಕಳು ಹಾದಿ ತಪ್ಪಿದ್ದಾರೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳುತ್ತಾರೆ. ಜೀವನ ಮಾಡುವವರಿಗೆ ಎರಡು ಸಾವಿರ ರೂಪಾಯಿಯೇ ಎರಡು ಲಕ್ಷದಂತೆ ಎಂಬುದು ಅವರಿಗೆ ತಿಳಿದಿಲ್ಲ. ೨೯ ರೂ.ಗೆ ಮಾರಲು ಬಿಜೆಪಿಗರಿಗೆ ಅಕ್ಕಿ ಇದೆ, ಆದರೆ ಅನ್ನಭಾಗ್ಯಕ್ಕೆ ನೀಡಲು ಅವರ ಬಳಿ ಅಕ್ಕಿ ಇಲ್ಲ. ಬಿಜೆಪಿ ಅಭ್ಯರ್ಥಿ ಕಾಗೇರಿಯವರು ನೀರಾವರಿ ಇಲಾಖೆ ಕಚೇರಿಯನ್ನ ಶಿರಸಿಗೆ ಒಯ್ದಿದ್ದರು. ನಮ್ಮ ಲಾಂಛನದಲ್ಲಿದ್ದ ಅಹಿಂಸೆಯ ಸಿಂಹವನ್ನ ಹಿಂಸೆಯ ಸಿಂಹವನ್ನಾಗಿ ಮಾಡಿದ್ದಾರೆ. ಹಿಂದಿನ ಸಂಸದ ಅನಂತಕುಮಾರ್ ಸಂವಿಧಾನವನ್ನ ಕಿತ್ತೊಗೆಯಲು ಕಾತರರಾಗಿದ್ದರು. ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಮಾಡಲು ಅವರಿಂದ ಆಗಿಲ್ಲ. ಹತ್ತು ವರ್ಷ ದೇಶವನ್ನ ಸತ್ಯಾನಾಶ ಮಾಡಿದ ಸರ್ಕಾರವಿದ್ದರೆ ಅದು ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಖಂಡ ಕೆ.ಎಂ.ಇಮ್ರಾನ್ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಯ ಐದು ಪಟ್ಟು ಯೋಜನೆಗಳು ಜಾರಿಯಾಗಲಿವೆ. ನಮಗೆ ಬಿಜೆಪಿಗರಂತೆ ಸುಳ್ಳು ಹೇಳಬೇಕಾದ ಅವಶ್ಯಕತೆ ಇಲ್ಲ. ಬಿಜೆಪಿಗರು ಮಾಡಿಸಿದ ಜನ್ ಧನ್ ಖಾತೆಗೆ ಈಗ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಯ ಎರಡು ಸಾವಿರ ಜಮೆಯಾಗುತ್ತಿದೆ ಎಂದರು.

ಅಂಬಿಕಾನಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಹಿಳೆಯರಿಂದ ಡಾ.ಅಂಜಲಿ ಅವರಿಗೆ ಸನ್ಮಾನಿಸಲಾಯಿತು. ಡಾ.ಅಂಜಲಿಯವರು ಇದೇವೇಳೆ ಗ್ಯಾರಂಟಿ ಕಾರ್ಡ್‌ಗಳನ್ನ ಸಾಂಕೇತಿಕವಾಗಿ ವಿತರಿಸಿದರು.

300x250 AD

ಕೆಪಿಸಿಸಿ ಸದಸ್ಯ ಸುಭಾಷ್ ಕೊರ್ವೇಕರ್, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ.ಚೌಗುಲೆ, ಪುರಸಭೆ ನಿಕಟಪೂರ್ವ ಅಧ್ಯಕ್ಷ ಅಜರ್ ಬಸರೀಕಟ್ಟಿ, ಪುರಸಭೆ ಸದಸ್ಯ ಶಂಕರ್ ಬೆಳಗಾಂವಕರ್, ಖಾನಾಪುರದ ರಿಯಾಜ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸಂತೋಷ್ ರೇಣಕೆ, ಮಹಿಳಾ ಅಧ್ಯಕ್ಷೆ ಮಾಲಾ ಬ್ರಗಾಂಜಾ, ಫಯಾಜ್ ಶೇಖ್ ಮುಂತಾದವರಿದ್ದರು.

ಕರ್ಮಭೂಮಿ ಕರ್ನಾಟಕದ ಋಣ ತೀರಿಸಲು ಬಂದಿರುವೆ…

ನನ್ನ ಹುಟ್ಟಿನ ಬಗ್ಗೆಯೂ ಬಿಜೆಪಿಗರು ಚರ್ಚೆ ಮಾಡುತ್ತಿದ್ದಾರೆ. ಹೌದು, ನಾನು ಹುಟ್ಟಿದ್ದು ಮುಂಬೈನಲ್ಲೇ. ಬೇಕಿದ್ದರೆ ಜನ್ಮ ದಾಖಲೆಯನ್ನೂ ಕೊಡುವೆ. ಇದೇ ಧರ್ಮ, ಜಾತಿಯಲ್ಲೇ ಹುಟ್ಟಬೇಕೆಂಬುದು ನಮ್ಮ ಕೈಯಲ್ಲಿ ಇರೋದಿಲ್ಲ; ಅದು ತಾಯಿಯಿಂದ ನಮಗೆ ಬರುವಂಥದ್ದು. ಆದರೆ ನನ್ನ ಕರ್ಮಭೂಮಿ, ಕೆಲಸ ಮಾಡುತ್ತಿರುವುದು ಕರ್ನಾಟಕದಲ್ಲಿ. ಈ ರಾಜ್ಯದ ಅನ್ನ ತಿಂದಿದ್ದೇನೆ, ನೀರು ಕುಡಿದಿದ್ದೇನೆ. ಆ ಋಣ ತೀರಿಸಲು ಸಮಾಜಸೇವೆಗೆ ಬಂದಿದ್ದೇನೆ. ಸಾವು ಕೂಡ ನನ್ನ ಕೈಯಲ್ಲಿಲ್ಲ, ಎಲ್ಲಿ ಸಾಯುತ್ತೇನೆಂದೂ ಗೊತ್ತಿಲ್ಲ. ಹುಟ್ಟು- ಸಾವುಗಳ ನಡುವೆ ಜನರಿಗಾಗಿ ಏನಾದರೂ ಮಾಡಬೇಕೆನ್ನುವುದಷ್ಟೇ ನನಗಿರುವುದು‌ ಎಂದು ‘ಡಾ.ಅಂಜಲಿ ನಿಂಬಾಳ್ಕರ್ ಮಹಾರಾಷ್ಟ್ರದವರು’ ಎಂಬ ಬಿಜೆಪಿಗರ ಟೀಕೆಗೆ ಡಾ.ಅಂಜಲಿ ತಿರುಗೇಟು ನೀಡಿದರು.

ಕಾಗೇರಿಯವರು ಎಲ್ಲಿ ಹುಟ್ಟಿದ್ದಾರೆಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಶಿರಸಿಯಲ್ಲೇ ಹುಟ್ಟಿದ್ದಾರೆಂದುಕೊಂಡಿದ್ದೇನೆ. ಹಾಗಿದ್ದರೆ ಹುಟ್ಟಿದ ಶಿರಸಿಗೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ಅವರು ಏನು ಕೊಟ್ಟಿದ್ದಾರೆ? ಶಿಕ್ಷಣ ಮಂತ್ರಿಯಾಗಿ ಒಂದು ಶಾಲೆ ಶಿರಸಿಗೆ ಕೊಟ್ಟಿದ್ದರೆ ತೋರಿಸಲಿ. ಅವರೂರಿನ ಜನರೇ ಬದಲಾವಣೆಬೇಕೆಂದು ಭೀಮಣ್ಣರನ್ನ ಶಾಸಕರನ್ನಾಗಿ ಮಾಡಿದ್ದಾರೆ. ಚುನಾವಣೆ ಬಂದಾಗ ಜಾತಿ, ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವುದನ್ನ ದಯವಿಟ್ಟು ಬಿಟ್ಟುಬಿಡಿ. ಜನರಿಗಾಗಿ ಏನು ಮಾಡಿದ್ದೀರೋ ಅದನ್ನ ತೋರಿಸಿ ಮತಯಾಚನೆ ಮಾಡಿ ಎಂದರು.

ಬೆಳಗಾವಿಯಿಂದ ಸ್ಪರ್ಧಿಸಿರುವ ಜಗದೀಶ್ ಶೆಟ್ಟರ್ ಎಲ್ಲಿಯವರು? ಬಿಜೆಪಿಗರು ಮೋದಿಯನ್ನ ಪ್ರಧಾನಿ ಮಾಡಲು ಮತ ಹಾಕಿ ಎನ್ನುತ್ತಿದ್ದಾರೆ. ಹಾಗಿದ್ದರೆ ಮೋದಿಯವರು ಹುಟ್ಟಿದ್ದು ಎಲ್ಲಿಂದ ಎಂದು ಜನರೂ ಬಿಜೆಪಿಗರನ್ನ ಕೇಳಬೇಕು ಎಂದರು.

Share This
300x250 AD
300x250 AD
300x250 AD
Back to top