ಹಳಿಯಾಳ: ಬಾಬಾ ಸಾಹೇಬ್ ಅಂಬೇಡ್ಕರರು ಐದು ವರ್ಷಕ್ಕೊಮ್ಮೆ ಚುನಾವಣೆ ಆಗಬೇಕೆಂದು ಸಂವಿಧಾನದ ಮೂಲಕ ಹೇಳಿದರು, ಅದಕ್ಕಾಗಿ ಚುನಾವಣೆ ನಡೆಯುತ್ತಿದೆ. ಸಂವಿಧಾನವಿಲ್ಲದಿದ್ದರೆ ಮೋದಿ ಸಾಹೇಬರು ಚುನಾವಣೆ ಮಾಡುತ್ತಲೇ ಇರಲಿಲ್ಲವೇನೋ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಟೀಕಿಸಿದರು.
ಕಾವಲವಾಡ ಜಿಲ್ಲಾ ಪಂಚಾಯತ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಆರು ಬಾರಿ ಸಂಸದರಾದವರು ಒಮ್ಮೆಯೂ ಮತದಾರರ ಮುಖ ನೋಡಲು ಬಂದಿಲ್ಲ. ಒಂದು ದಿನವೂ ಸಂಸತ್‌ನಲ್ಲಿ ಮಾತನಾಡಿಲ್ಲ. ಬಡವರ ಪರ, ರೈತರ ಪರ, ಭ್ರಷ್ಟಾಚಾರ ರಹಿತ, ಅಭಿವೃದ್ಧಿ ಪರ ಇರುವವರನ್ನ ಗೆಲ್ಲಿಸಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಬಲ ಬರಲು ಸಾಧ್ಯ. ಇದನ್ನ ತಿಳಿದು ಮತ ಚಲಾಯಿಸಬೇಕು ಎಂದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಬಿಜೆಪಿಗರು ಸುಳ್ಳು ಹೇಳುತ್ತಲೇ ನಮ್ಮ ಮುಗ್ದ ಜನರನ್ನ ನಂಬಿಸಿ ೧೦ ವರ್ಷ ಕಳೆದರು. ಇಷ್ಟೊಂದು ಸುಳ್ಳನ್ನಾಡುವ ಅವರನ್ನ ದೇವರು ಕೂಡ ಕ್ಷಮಿಸಲಾರ. ಯುವಜನರನ್ನ ವಾಟ್ಸಪ್ ಯೂನಿವರ್ಸಿಟಿ, ಹಿಂದುತ್ವದ ಹೆಸರಿನಲ್ಲಿ ಬಿಜೆಪಿಗರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಆದರೆ ಆ ವಾಟ್ಸಪ್ ಬಳಸಲು ಮೊಬೈಲ್ ಕ್ರಾಂತಿ ನಡೆದಿದ್ದು ಕಾಂಗ್ರೆಸ್‌ನ ರಾಜೀವ್ ಗಾಂಧಿ ಕಾಲದಲ್ಲಿ ಎನ್ನುವುದನ್ನ ಮರೆಯಬಾರದು. ಕೊರೋನಾ ಸಮಯದಲ್ಲಿ ಆಕ್ಸಿಜನ್, ವೆಂಟಿಲೇಟರ್ ಹೆಸರಿನಲ್ಲೂ ಮೋದಿಯವರು ರಾಜಕೀಯ ಮಾಡಿದರು. ಕಾಂಗ್ರೆಸ್ ಸರ್ಕಾರದ ಐದಕ್ಕೆ ಐದು ಗ್ಯಾರಂಟಿಯಿಂದಾಗಿ ಬಡಜನರಿಗೆ ಅನ್ನ ಸಿಗುತ್ತಿದೆ ಎಂಬುದನ್ನ ಎದೆತಟ್ಟಿ ಹೇಳುತ್ತೇನೆ. ಆದರೆ ಬಿಜೆಪಿ ಜಿಎಸ್‌ಟಿ ಹೇರಿ ಜನರನ್ನ ಸಮಸ್ಯೆಗಳಲ್ಲಿ ಸಿಲುಕಿಸಿತು. ಅಗತ್ಯ ವಸ್ತುಗಳ ದರ ಗಗನಕ್ಕೆ ಏರಿಸಿದರು. ಲೂಟಿ ಮಾಡಿ ಮಾಡಿ ದೇಶವನ್ನೇ ಇವರು ಲೂಟಿಗೈಯ್ಯುತ್ತಿದ್ದಾರೆ. ಅದಾನಿ- ಅಂಬಾನಿಯ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿದ್ದಾರೆ, ಆದರೆ ಬಡವರ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಭಗವಾ ಧ್ವಜ ಬಿಜೆಪಿಯದ್ದಲ್ಲ, ನಮ್ಮ ಪೂರ್ವಜರ ಬಲಿದಾನದ ಪ್ರತೀಕವದು. ಅದಕ್ಕಾಗಿಯೇ ತ್ರಿವರ್ಣ ಧ್ವಜದಲ್ಲಿ ಕೇಸರಿ ಬಳಸಿದ್ದು. ನಮ್ಮದೂ ರಾಜ ಛತ್ರಪತಿಯ ರಕ್ತ. ಅವರ ದಾರಿಯಲ್ಲಿ ನಡೆದು ಎಲ್ಲಾ ಜಾತಿಗಳನ್ನ ಒಂದುಗೂಡಿಸಿ ನಡೆಯುವ ಪಕ್ಷ ಕಾಂಗ್ರೆಸ್. ನಿಮ್ಮ ಸ್ವಾರ್ಥಕ್ಕಾಗಿ, ಆರೋಗ್ಯ, ಶಿಕ್ಷಣಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಉಮೇಶ್ ಬೋಳಶೆಟ್ಟಿ, ಚಾಯ್‌ವಾಲನಾದರೂ ಮೋದಿಗೆ ಬಡವರ ನೋವು ಗೊತ್ತಿಲ್ಲ. ಸಮಾನತೆ ಸಾರುವ ಸಂವಿಧಾನವನ್ನ ತಿದ್ದುಪಡಿ ಮಾಡುತ್ತೇವೆಂಬ ಬಿಜೆಪಿಗರು ಎಲ್ಲಿ, ಕೂಡಿ ಬಾಳಿದರೆ ಸ್ವರ್ಗ ಸುಖವೆಂಬ ಕಾಂಗ್ರೆಸ್ ಎಲ್ಲಿ. ಬಡವರ ಕಣ್ಣೀರು ಒರೆಸುವ ನಾಯಕರು ಬೇಕೋ, ಕೋಮುವಾದದ ಮೂಲಕ ಯುವಕರನ್ನ ಬೀದಿಗೆ ತಳ್ಳುವವರು ಬೇಕೋ ಎನ್ನುವುದನ್ನ ಯೋಚಿಸಿ ಮತದಾನ ಮಾಡಬೇಕು ಎಂದು ಕರೆನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ.ಚೌಗುಲೆ ಮಾತನಾಡಿ, ಮನ್ ಕೀ ಬಾತ್‌ನಲ್ಲೇ ಸಮಯ ವ್ಯರ್ಥ ಮಾಡಿದ ಮೋದಿ, ಜನಕ್ಕಾಗಿ ಒಮ್ಮೆಯೂ ರಾಜ್ಯಕ್ಕೆ ಬಂದಿಲ್ಲ. ಈಗ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಟೀಕಿಸಿದರು.
ಕೆಪಿಸಿಸಿ ಸದಸ್ಯ ಸುಭಾಷ್ ಕೊರ್ವೇಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ರಿಯಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕುಮಾರ್ ಜಾವ್ಲೇಕರ್, ಮುಖಂಡರಾದ ದೇಮಾನಿ ಶೇರೋಜಿ, ಶಂಕರ ಬೆಳಗಾಂವ್ಕರ್, ಬಾಬು ಮಿರಾಶಿ, ಸಂಜು ಕಾನ್ಕತ್ರಿ, ಮೌಲಾಲಿ ಅಜಗಾಂವ್ಕರ್ ಮುಂತಾದವರು ಉಪಸ್ಥಿತರಿದ್ದರು.