ಬ್ಲಾಕ್ ಅಧ್ಯಕ್ಷರು ಫೋನ್ ಎತ್ತುವುದಿಲ್ಲ : ಬೂತ್ ಮಟ್ಟದ ಸಭೆಯೂ ನಡೆದಿಲ್ಲ.. ಯಾಕೆ..?
ಹೊನ್ನಾವರ : ಭಟ್ಕಳ ವಿಧಾನಸಭಾ ಕ್ಷೇತ್ರದ ಮಂಕಿ ಬ್ಲಾಕ್ ಕಾಂಗ್ರೆಸ್ ನ ಮುಖಂಡರಿಂದ ಹಿಡಿದು ಬೂತ್ ಮಟ್ಟದ ಕಾರ್ಯಕರ್ತರವರೆಗೆ ಕಾಂಗ್ರೆಸ್ ಮೇಲೆ ಒಲವಿದೆ, ಸಂಘಟನೆ ಮಾಡುವ ಹುಮ್ಮಸ್ಸು ಕೂಡ ಇದೆ. ಅದರ ಜೊತೆಗೆ ಸಚಿವ ಮಂಕಾಳ್ ವೈದ್ಯರ ನಂಬಿರುವ ಅಭಿಮಾನಿ ಬಳಗವೇ ಇದೆ. ಹೀಗಿರುವಾಗ ವಿಧಾನಸಭಾ ಚುನಾವಣೆ ನಂತರ ಈ ವ್ಯಾಪ್ತಿಯಲ್ಲಿ ಸಂಘಟನೆ ಸೊರಗಿದಂತೆ ಕಂಡು ಬರುತ್ತಿರುವ ಬಗ್ಗೆ ಕಾರ್ಯಕರ್ತರಿಂದ ಅಸಮಾಧಾನ ಮಾತು ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿಯೇ ಕ್ರಿಯಾಶೀಲ ಸಂಘಟನೆಯಾಗಿ ಮಂಕಿ ಬ್ಲಾಕ್ ಕಾಂಗ್ರೆಸ್ ಗುರುತಿಸಿಕೊಂಡಿತ್ತು. ಬ್ಲಾಕ್ ಅಧ್ಯಕ್ಷರು, ಉಳಿದ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಆಯೋಜನೆ ಮಾಡಿಕೊಂಡು ಬಂದಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಪ್ರತಿತಿಂಗಳು ಬ್ಲಾಕ್ ಸಭೆ ನಡೆಯುತ್ತಿತ್ತು. ಚುನಾವಣೆ ಹತ್ತಿರದಲ್ಲಿ ಹಲವಾರು ವೀಕ್ಷಕರ ತಂಡ ಮಾಡಿ ಒಬ್ಬರಾದ ಮೇಲೆ ಒಬ್ಬರಂತೆ ಬೂತ್ ಮಟ್ಟದ ಸಭೆ ನಡೆಸಲಾಗಿತ್ತು. ಕೊನೆಯದಾಗಿ ಪ್ರಮುಖ ಮುಖಂಡರ ಸಾರ್ವಜನಿಕ ಸಭೆ ನಡೆಸಲಾಗಿತ್ತು. ಸಾರ್ವಜನಿಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಕಾಂಗ್ರೆಸ್‌ಗೆ ಜೈಕಾರ ಹಾಕಿದ್ದರು. ಚುನಾವಣೆ ನಂತರವು ಪುನಃ ಬೂತ್ ಮಟ್ಟದ ಸಭೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಲೋಕಸಭಾ ಚುನಾವಣೆ ಸಮಯದಲ್ಲೂ ಬೂತ್ ಸಭೆ ಕಾಣದಾಗಿದೆ.
ಚುನಾವಣೆ ಮುಗಿದ ಮೇಲೆ ಶಾಸಕರು ಸಿಕ್ಕಿದರು. ಕ್ಯಾಬಿನೆಟ್ ದರ್ಜೆಯ ಸಚಿವರೂ ಸಿಗುವಂತಾಯಿತು. ಕಾರ್ಯಕರ್ತರ, ಮತದಾರರ ಹರ್ಷೋದ್ಗರ ಮುಗಿಲು ಮುಟ್ಟಿತು. ನಿರೀಕ್ಷೆಯ ಆಶಾಗೋಪುರ ಜನ ಸಾಮಾನ್ಯರ ಮನಸ್ಸಲ್ಲಿ, ಹೃದಯದಲ್ಲಿ ಮನೆ ಮಾಡಿತ್ತು. ದಿನ ಕಳೆದಂತೆ ಹಂತಹಂತವಾಗಿ ಪರಿಸ್ಥಿತಿಯ ಬದಲಾವಣೆ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಬ್ಲಾಕ್ ನಡುವಿನ ಅಂತರ ಕಡಿಮೆಯಾಗುತ್ತಾ ಸಾಗಿತು, ಈಗ ಒಂದಿಷ್ಟು ಜನರಿಗೆ ಅದರ ಸಂಪರ್ಕವೇ ಕಡಿತ ಅನ್ನುವಷ್ಟರ ಮಟ್ಟಿಗೆ ಹತಾಸೆಯ ಮಾತುಗಳು ಕೇಳಿ ಬರಲು ಪ್ರಾರಂಭಗೊಂಡಿದೆ.
ಸಚಿವರು ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಆಗಾಗ ಅಹವಾಲು ಸ್ವೀಕಾರ ಸಭೆ ಮಾಡುತ್ತಿದ್ದಾರೆ. ಅಲ್ಲಿ ಜನ ಸಾಮಾನ್ಯರ ಜೊತೆಗೆ ಚುನಾವಣೆ ಸಮಯದಲ್ಲಿ ಕಾಣದ ಕೆಲವು ಬಿಳಿ ಅಂಗಿ ರಾಜಾರಿಸುತ್ತಿದೆ. ಹಿಂದೆ ದುಡಿದವರು ಅಭಿಮಾನದ ದ್ಯೋತಕವಾಗಿ ನಿಂತು ನಿಂತು ಅಲ್ಲಿಯ ಬೆಳವಣಿಗೆ ನೋಡಿ ಮನೆ ಸೇರುವಂತಾಗಿದೆ. ಸದ್ಯದ ಬೆಳವಣಿಗೆ ಹೀಗಿದ್ದರು ಕೂಡ ಕೆಲವರು ಮುಂದೆ ಕಾಲಾವಕಾಶ ಇದೆ ಎನ್ನುವ ನಿರೀಕ್ಷೆಯ ಮೂಟೆ ಹೊತ್ತು ಕಾಯುತ್ತಿದ್ದಾರೆ. ಕೆಲವರು ತಮ್ಮ ತಮ್ಮ ಬದುಕಿಗೆ ಪರ್ಯಾಯ ಮಾರ್ಗ ಹುಡುಕಿಕೊಳ್ಳುತ್ತಿದ್ದಾರೆ.
ಸಚಿವರಿಗೆ ಕೆಲಸದ ಒತ್ತಡ, ಇಡೀ ರಾಜ್ಯ ತಿರುಗಾಡಬೇಕು, ಸಮಯದ ಕೊರತೆ ಇದೆ. ಇಂತ ಸಮಯದಲ್ಲಿ ಕೆಲಸ ಕಾರ್ಯಗಳಿಗೆ ನೆನಪಾಗುವುದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಫೋನ್ ಏನೋ ಹೋಗುತ್ತೆ ರಿಂಗ್ ಕೂಡ ಆಗುತ್ತೆ ಫೋನ್ ಮಾತ್ರ ಸ್ವೀಕರಿಸುವುದಿಲ್ಲ ಎನ್ನುವ ಆರೋಪ ಬೂತ್ ಅಧ್ಯಕ್ಷರಿಂದಲೇ ಕೇಳಿ ಬರುತ್ತಿದೆ. ಅದರ ಜೊತೆ ಚುನಾವಣೆ ಮುಗಿದ ಮೇಲೆ ಬ್ಲಾಕ್ ಸಭೆ ಆಗಿದ್ದು ಬೆರಳೆಣಿಕೆಯಷ್ಟು ಮಾತ್ರ, ಬೂತ್ ಮಟ್ಟದ ಸಭೆ ಕನಸೇ ಇರಬಹುದು, ಲೋಕಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡರು ಬೂತ್ ಮಟ್ಟದ ಸಭೆ ಆಗುವ ಲಕ್ಷಣ ಕಂಡು ಬರುತ್ತಿಲ್ಲ. ಸದ್ಯದ ಮಟ್ಟಿಗೆ ಬ್ಲಾಕ್ ಅಧ್ಯಕ್ಷರು ಮತ್ತು ಬೂತ್ ಕಾರ್ಯಕರ್ತರ ನಡುವೆ ಗ್ಯಾಪ್ ಉಂಟಾಗಿರುವುದು ಮಾತ್ರ ಬಹಿರಂಗ ಸತ್ಯ.
ಇದೆಲ್ಲದರ ನಡುವೆ ಬ್ಲಾಕ್ ಅಧ್ಯಕ್ಷರ ಬದಲಾವಣೆ ಆಗುತ್ತೆ ಅನ್ನುವ ಮಾತು ಕೂಡ ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡಿತ್ತು. ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಹೈಕಮಾಂಡ್ ಸೂಚನೆ ಬಂದರೆ ಬದಲಾವಣೆ ಅನಿವಾರ್ಯ ಅನ್ನುವ ಪ್ರಸ್ತಾಪ ಸೂಚನೆ ಬಂದಿರುವ ಸುದ್ದಿಗೆ ವೇಗ ಹೆಚ್ಚಾಗಿತ್ತು. ಲೋಕಸಭಾ ಚುನಾವಣೆ ಕಾಲಗಟ್ಟದಲ್ಲಿ ಬ್ಲಾಕ್ ಅಧ್ಯಕ್ಷರ ಖುರ್ಚಿ ಕಟ್ಟಿ ನಿಂತಿದೆ.
ಬ್ಲಾಕ್ ಅಧ್ಯಕ್ಷರು ಯಾಕೆ ಆಗಾಗ ಫೋನ್ ರಿಸೀವ್ ಮಾಡುತ್ತಿಲ್ಲ, ಅವರಿಗೂ ಏನಾದರು ಸಂದಿಗ್ಧ ಪರಿಸ್ಥಿತಿ ಉಂಟಾಗಿದೆಯೇ, ಪ್ರಾರಂಭದಲ್ಲಿ ಅತೀ ಚುರುಕಿನ ಸಂಘಟನೆ ಮಾಡಿದ್ದ ಅಧ್ಯಕ್ಷರು ಪಕ್ಷ ಆಡಳಿತಕ್ಕೆ ಬಂದ ಮೇಲೆ ಬದಲಾವಣೆ ಆಗಿದ್ದು ಯಾಕೆ..? ಅವರ ಸಂಘಟನೆಗೆ ಅಡ್ಡ ಯಾರಾದರೂ ಬರುತ್ತಿದ್ದಾರಾ.? ಅನೇಕ ಪ್ರಮುಖ ಮುಖಂಡರೆ ಬ್ಲಾಕ್ ಅಧ್ಯಕ್ಷರು ಫೋನ್ ಎತ್ತುವುದಿಲ್ಲ ಎನ್ನುವ ಆರೋಪ ಮಾಡುತ್ತಿದ್ದರು, ಅಧ್ಯಕ್ಷರು ಸರಿಪಡಿಸಿ ಕೊಳ್ಳುತ್ತಿಲ್ಲ ಯಾಕೆ..? ಎನ್ನುವ ನೂರೆಂಟು ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ.