ಕಾರವಾರ: ಡಾ.ಹಿರೇಮಠ ಫೌಂಡೇಶನ್, ರಾಜ್ಯ ಸನಾತನ ರಕ್ಷಣಾ ವೇದಿಕೆಯ ವತಿಯಿಂದ ಮಾ. 4 ರಂದು ರಾಮ ಮಂದಿರದ ರಾಮಲಲ್ಲಾ ಮೂರ್ತಿ ತಯಾರಿಸಿದ ಅರುಣ್ ಯೋಗರಾಜ್ ಅವರಿಗೆ ‘ಅಭಿನವ ಅಮರ ಶಿಲ್ಪಿ ಪ್ರಶಸ್ತಿ’ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸನಾತನ ರಕ್ಷಣಾ ವೇದಿಕೆಯ ಡಾ. ಗಜೇಂದ್ರ ನಾಯ್ಕ ಹೇಳಿದರು.
ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಇಲ್ಲಿನ ಸಾಗರ ದರ್ಶನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಿಲ್ಪಿ ಅರುಣ್ ಯೋಗಿರಾಜ್ ಅವರು ಇಡೀ ಕನ್ನಡಿಗರಿಗೆ ಹೆಮ್ಮೆ ತರುವಂತಹ ಕಾರ್ಯವನ್ನು ಮಾಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನ ಜಿಲ್ಲೆಯ ಕಾರವಾರಕ್ಕೆ ಕರೆತಂದು ಸನ್ಮಾನಿಸಬೇಕು ಎನ್ನುವುದು ಡಾ. ವಿಶ್ವನಾಥ ಹಿರೇಮಠ ಅವರ ಬಹುದೊಡ್ಡ ಬಯಕೆಯಾಗಿತ್ತು. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹಲವು ಸೇವಾ ಕಾರ್ಯದಲ್ಲಿ ಡಾ. ಹಿರೇಮಠ ಫೌಂಡೇಶನ್ ಮಾಡುತ್ತಾ ಬರಲಾಗಿದೆ. ಇದೀಗ ಧಾರ್ಮಿಕತೆಯ ಸಾರವನ್ನು ಎತ್ತಿ ಹಿಡಿಯಲು ಅಯೋಧ್ಯೆಯ ಶ್ರೀರಾಮ ಮಂದಿರದ ರಾಮಲಲ್ಲಾ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ಅಭಿನವ ಅಮರ ಶಿಲ್ಪಿ ಬಿರುದನ್ನು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಡಾ.ಹಿರೇಮಠ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಚೇತನ್ ಮಾತನಾಡಿ ಶಿಲ್ಪಿ ಅರುಣ್ ಯೋಗಿರಾಜ್ ಅವರು ಇಡೀ ದೇಶದ ಹೆಮ್ಮೆಯ ಪ್ರತೀಕವಾಗಿರುವ ರಾಮ ಮಂದಿರದ ಸುಂದರ ರಾಮಲಲ್ಲಾ ಮೂರ್ತಿಯ ಕೆತ್ತನೆಯನ್ನ ಮಾಡಿದವರು. ನಮ್ಮ ರಾಜ್ಯದ ಮೈಸೂರು ಮೂಲದವರು ಎನ್ನುವುದು ಎಲ್ಲರ ಹೆಮ್ಮೆಯ ಸಂಗತಿಯಾಗಿದೆ. ಮಾ. 4 ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೊದ ಮುತಾಲಿಕ, ಡಾ. ಹಿರೇಮಠ ಫೌಂಡೇಶನ ಸಂಸ್ಥಾಪಕ ಡಾ. ವಿಶ್ವನಾಥ ಹಿರೇಮಠ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಶರತ ಬಾಂದೇಕರ, ಚಂದ್ರಕಾಂತ ಹರಿಕಂತ್ರ, ದೀಲೀಪ ಗೋವೇಕರ, ರಾಜೇಂದ್ರ ನಾಯ್ಕ, ಪ್ರಕಾಶ ನಾಯ್ಕ, ಪ್ರದೀಪ ನಾಯ್ಕ, ಅಶೋಕ ರಾಣೆ, ದಿನಕರ ನಾಗೇಕರ, ಚಂದ್ರಕಾಂತ ನಾಯ್ಕ, ಯಶೋಧಾ ಹೆಗಡೆ ಮೊದಲಾದವರು ಪತ್ರಿಕಾಗೊಷ್ಟಿಯಲ್ಲಿದ್ದರು.