ದಾಂಡೇಲಿ: ರಾಜ್ಯದ ಬಜೆಟ್’ನಲ್ಲಿ ಹೊಸ 55 ತಾಲೂಕುಗಳಿಗೆ ವಿವಿಧ ಕಚೇರಿಗಳನ್ನು ಪ್ರಾರಂಭಿಸಲು ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿದ್ದಾರೆ.
ಅವರು ಗುರುವಾರ ನಗರದಲ್ಲಿ ಮಾಧ್ಯಮದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಯನ್ನು ಮಾಡಿದ್ದಾರೆ. ರಾಜ್ಯದಲ್ಲಿ 2018 ರಲ್ಲಿ ಘೋಷಣೆ ಮಾಡಿದ ಹೊಸ 55 ತಾಲೂಕುಗಳಲ್ಲಿ ದಾಂಡೇಲಿಯನ್ನು ಸಹ ತಾಲೂಕನ್ನಾಗಿ ಮಾಡಲಾಗಿದ್ದರೂ, ಇಲ್ಲಿಯವರೆಗೆ ಪೂರ್ಣ ಪ್ರಮಾಣದ ತಾಲೂಕುಮಟ್ಟದ ಕಾರ್ಯ ನಡೆಯುತ್ತಿಲ್ಲ. ಇಂದಿಗೂ ಸಹ ಬೇರೆ ತಾಲೂಕಿನ ಮೇಲೆ ದಾಂಡೇಲಿ ಅವಲಂಬಿತವಾಗಿದೆ. ತಾಲ್ಲೂಕು ಆಡಳಿತ ಸೌಧವೊಂದು ಬಿಟ್ಟು ಮುಖ್ಯವಾದ ತಾಲೂಕು ಮಟ್ಟದ ಕಚೇರಿಗಳು ಇನ್ನೂ ಆರಂಭವಾಗಿಲ್ಲ. ಅದ್ದರಿಂದ 55 ತಾಲೂಕುಗಳಲ್ಲಿ ತಾಲೂಕು ಮಟ್ಟದ ಕಚೇರಿಗಳು ಕಾರ್ಯ ಮಾಡಲು ಸೂಕ್ತ ಆದೇಶ ಮತ್ತು ವಿಶೇಷ ಅನುದಾನವನ್ನು ಈ ವರ್ಷದ ಬಜೆಟ್ ನಲ್ಲಿ ಬಿಡುಗಡೆ ಮಾಡಬೇಕೆಂದು ಅಕ್ರಂ ಖಾನ್ ಅವರು ಮನವಿ ಮಾಡಿದ್ದಾರೆ.