ಶಿರಸಿ: ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 19 ರಿಂದ 27 ರ ವರೆಗೆ ನಡೆಯಲಿದೆ.
ನಗರದ ಮಾರಿಕಾಂಬಾ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಕಾರ್ಯಕ್ರಮದಲ್ಲಿ ಮುಹೂರ್ತ ನಿಗದಿಗೊಳಿಸಿದ ನಂತರ ಶರಣ ಆಚಾರ್ಯ ದಿನಾಂಕವನ್ನು ಪ್ರಕಟಿಸಿದರು.
ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಪೂರ್ವ ವಿಧಿ ವಿಧಾನಗಳು ಜನವರಿ 31 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 19ರಂದು ದೇವಿಯ ರಥದ ಕಲಶ ಪ್ರತಿಷ್ಠೆ ಮತ್ತು ಕಲ್ಯಾಣ ಪ್ರತಿಷ್ಠೆ ಹಾಗೂ ಮಾರ್ಚ್ 20ರಂದು ರಥೋತ್ಸವ ನೆರವೇರಲಿದೆ. ನಂತರ ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಲಕ್ಷಾಂತರ ಜನರು ಎಂಟು ದಿನಗಳ ಕಾಲ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಳ್ಳುವ ದೇವಿಯ ದರ್ಶನವನ್ನು ಪಡೆದು ಹರಕೆ ಸೇವೆ ಸಮರ್ಪಿಸಲಿದ್ದಾರೆ. ಮಾರ್ಚ್ 21 ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವೆಗೆ ಅವಕಾಶವಿರಲಿದೆ. 27 ರಂದು ಜಾತ್ರಾ ವಿಧಿ ವಿಧಾನಗಳು ಮುಗಿಯಲಿದ್ದು, ಯುಗಾದಿಗೆ ದೇವಾಲಯದಲ್ಲಿ ಮಾರಿಕಾಂಬಾ ದೇವಿ ಪುನರ್ ಪ್ರತಿಷ್ಠೆ ಆಗಲಿದೆ ಎಂದು ತಿಳಿಸಲಾಗಿದೆ.