Slide
Slide
Slide
previous arrow
next arrow

‘ನಮ್ಮೂರ ಹಬ್ಬ: ಶೇಡಿಮರ ಆಡುವ ಶೇಡಬರಿ ಜಾತ್ರೆ’

300x250 AD

ಭಟ್ಕಳ: ತಾಲೂಕಿನ ಪುರಾಣ ಪ್ರಸಿದ್ಧ ಹೆಬಳೆಯ ‘ಶ್ರೀ ಶೇಡಬರಿ ಜಾತ್ರೆ’ ಜನವರಿ 15-16 ಎರಡು ದಿನಗಳ ಕಾಲ ಅತ್ಯಂತ ವೈಭವೋಪೇತವಾಗಿ ನಡೆಯಲಿದೆ. ಹಿಂದಿನ ಸಂಪ್ರದಾಯಬದ್ಧ ಆಚರಣೆಗಳು ಕೆಲವು ಧಾರ್ಮಿಕ ವಿಧಿವಿಧಾನಗಳ ಮೂಲಕ ಈ ಜಾತ್ರೆಯಲ್ಲಿ ನಡೆಯುವುದಕ್ಕೆ ಹಾಗೂ ಶೇಡಿಮರದ ಹರಕೆಯ ಸೇವೆಯಾಟಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.

ಜಾತ್ರೆಯ ದಿನ ಶೇಡಿಮರ ಆಡುವುದು ಇಲ್ಲಿನ ವಿಶೇಷ ಸೇವೆಯಾಗಿದ್ದು, ದೇವಸ್ಥಾನದ ದಕ್ಷಿಣ ದ್ವಾರಕ್ಕೆ ಅಭಿಮುಖವಾಗಿ ಶಾಶ್ವತವಾಗಿ ನೇರ ನಿಲ್ಲಿಸಲಾದ ವಾಂಟೆಮರದ ಶೇಡಿಕಂಬಕ್ಕೆ ಮೇಲ್ಗಡೆ ಇನ್ನೊಂದು ಬಿಳಿಸಂಪಿಗೆ ಮರದ ಕಂಬವನ್ನು ಜಾತ್ರೆಯ ಹಿಂದಿನ ದಿನ ಅಡ್ಡವಾಗಿ ಲಾಕ್‌ ಮಾಡಿ, ಮೂರು ಸುತ್ತು ತಿರುಗಿಸಿ ಪೂರ್ವತಯಾರಿ ಮಾಡಿಕೊಳ್ಳಲಾಗುತ್ತದೆ. ಇದರ ಎರಡೂ ಬದಿಗಳಲ್ಲಿ ಸಿಂಗಾರವನ್ನು ಕಟ್ಟಿ, ಹಗ್ಗವನ್ನು ಕೆಳಗೆ ನೆಲದವರೆಗೂ ಇಳಿಬಿಡುತ್ತಾರೆ. ಒಂದು ಬದಿಗೆ ಮೇಲ್ಗಡೆ ಹರಕೆ ಅರ್ಪಿಸುವ ಭಕ್ತಾದಿಗಳು ಕುಳಿತುಕೊಳ್ಳುವ ಹಾಗೆ ಜೋಕಾಲಿ ರೂಪದಲ್ಲಿ ಹಗ್ಗವನ್ನು ಕಟ್ಟುತ್ತಾರೆ. ಇದನ್ನೇ ಶೇಡಿಮರ ಅಂತ ಕರೆಯುತ್ತಾರೆ. ಇದರ ಒಂದು ಬದಿಯಲ್ಲಿ ಹರಕೆ ಹೊತ್ತ ಭಕ್ತಾದಿಗಳು ಕುಳಿತುಕೊಂಡರೆ, ಇನ್ನೊಂದು ಬದಿಯಲ್ಲಿ ಕೆಳಗೆ ಇಳಿಬಿಡಲಾದ ಹಗ್ಗದಿಂದ ದೇವಸ್ಥಾನದ ವತಿಯಿಂದ ನಿಯೋಜಿಸಲಾದ ನುರಿತ ಸ್ವಯಂಸೇವಕರು ಈ ಶೇಡಿಕಂಬವನ್ನು ಸಮಾನ ರೇಖೆಯಲ್ಲಿ ನಿಯಂತ್ರಿಸುತ್ತಾ, ಮೂರು ಸುತ್ತು ತಿರುಗಿಸುತ್ತಾರೆ. ದೊಡ್ಡವರು ಒಬ್ಬರೇ ಕುಳಿತುಕೊಂಡರೆ, ಚಿಕ್ಕವರನ್ನು ಅನುಭವವುಳ್ಳ ಹರಕೆ ಹೊತ್ತ ಹಿರಿಯ ಭಕ್ತಾದಿಗಳನ್ನು ಆಡಳಿತ ಸಮಿತಿಯವರು ಗುರುತಿಸಿ ಅಂಥವರ ತೊಡೆಯ ಮೇಲೆ ಕೂರಿಸಿ ತಿರುಗಿಸುವ ಮೂಲಕ ಅವರ ಹರಕೆಯನ್ನು ದೇವರಿಗೆ ಒಪ್ಪಿಸುತ್ತಾರೆ. ಹೀಗೆ ತಿರುಗಿಸುತ್ತಿರುವಾಗ,ಶೇಡಿಮರ ಆಡುವ ಭಕ್ತರು ತಮ್ಮ ಕೈಯಿಂದ ಸಿಂಗಾರ ಮತ್ತು ಬಾಳೆಹಣ್ಣನ್ನು ಕೆಳಗಡೆ ಇರುವ ಭಕ್ತರತ್ತ ಎಸೆಯುತ್ತಾರೆ. ಮೂರು ಸುತ್ತು ಮುಗಿಯುವುದರಲ್ಲಿ ಅವುಗಳನ್ನು ತಮ್ಮ ಕೈಯಿಂದ ಖಾಲಿ ಮಾಡುತ್ತಾರೆ. ಈ ಸಮಯದಲ್ಲಿ ಶೇಡಿಮರ ಆಡುವ ಭಕ್ತರು ವೃತಾಚರಣೆಯಲ್ಲಿದ್ದು, ಕೊರಳಲ್ಲಿ ಕೆಂಪು ಹೂವಿನ ಮಾಲೆ ಧರಿಸಿ, ಹೊಸ ಬಟ್ಟೆಯೊಂದಿಗೆ ಶ್ವೇತಾಧಾರಿಯಾಗಿರುತ್ತಾರೆ. ಈ ಶೇಡಿಮರದ ಆಡುವ ಮೊದಲು ಜಟಗ ಮತ್ತು ಮಹಾಸತಿ ದೇವರುಗಳಿಗೆ ಪೂಜೆಯನ್ನು ಮಾಡಿಸಿ ಸಂಕಲ್ಪ ಮಾಡಿಕೊಳ್ಳಬೇಕಾಗುತ್ತದೆ. ಇದಲ್ಲದೇ ಶ್ರೀ ಕ್ಷೇತ್ರದ ಒಳಗೆ ಹಣ್ಣುಕಾಯಿ ಸೇವೆ, ಹರಕೆಪಟ್ಟಿ ಸೇವೆ, ಬೋಗದ ಬುಟ್ಟಿ ಸೇವೆ, ಉಡಿಸೇವೆ, ಹೂವಿನ ಪೂಜೆ, ಹೆಸರು ಒಪ್ಪಿಸುವ ಸೇವೆ ಹಾಗೂ ಇನ್ನಿತರ ಸೇವೆಗಳೂ ಕೂಡ ಜಾತ್ರೆಯ ದಿನ ನಡೆಯುತ್ತವೆ.

ಜಾತ್ರೆಯ ದಿನ ಕ್ಷೇತ್ರದ ಪ್ರಮುಖ ದೇವರುಗಳಾದ ಜಟಗ ಮತ್ತು ನವ ಮಹಾಸತಿಯರಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತೊಡಿಸಲಾಗತ್ತದೆ. ಶೇಡಿಮರದ ಸೇವೆಯಾಟ ಆರಂಭವಾಗುವ ಮೊದಲು ಪ್ರಮುಖ ದೇವರುಗಳ ಜೊತೆಗೆ ಪ್ರಧಾನ (ವೀರ) ಮತ್ತು ಬ್ರಹ್ಮ ಹಾಗೂ ಸುತ್ತಲಿನ ಪರಿವಾರ ದೇವರುಗಳಿಗೆ “ಧೂಪನೆಣೆ ” ಹಾಕಿ ಮಹಾಪೂಜೆಯನ್ನು ನೆರವೇರಿಸಿ, ಭಾಷೆ ಕಲ್ಲಿಗೆ ಈಡುಗಾಯಿಯನ್ನು ಕೆಲವು ಸಂಬಂಧಪಟ್ಟವರಿಂದ ಒಡೆಸಲಾಗುತ್ತದೆ. ನಂತರ ಶೇಡಿಮರ ಆಡಿಸುವುದಕ್ಕೆ ಪೂಜಾರಿಯವರು ಶೇಡಿಮರಕ್ಕೆ ಪೂಜೆ ಸಲ್ಲಿಸಿ ಚಾಲನೆ ಕೊಡುತ್ತಾರೆ. ನಂತರವೇ ಈ ಸೇವೆಯಾಟ ಪ್ರಾರಂಭವಾಗುತ್ತದೆ. ಮುಗಿದ ಬಳಿಕ ಮತ್ತೆ ಪುನಃ ಶೇಡಿಮರವನ್ನು ಅದರ ಎರಡೂ ತುದಿಗಳಲ್ಲಿ ಇಳಿಬಿಡಲಾಗಿದ್ದ ಹಗ್ಗಗಳಿಂದಲೇ ಕಟ್ಟಿ ಒಂದು ವಾರದವರೆಗೆ ಇಡುತ್ತಾರೆ. ನಂತರ ಮೇಲ್ಗಡೆ ಅಡ್ಡ ಹಾಕಲಾದ ಶೇಡಿಕಂಬವನ್ನು ಕೆಳಗಿಳಿಸಿ ದೇವರಿಗೆ ಆರತಿ ಬೆಳಗಿ ಸುರಕ್ಷಿತವಾಗಿ ಇಡಲಾಗುತ್ತದೆ. ಶಾಶ್ವತವಾಗಿ ನಿಲ್ಲಿಸಲಾದ ಶೇಡಿಕಂಬಕ್ಕೆ ಎಣ್ಣೆಯನ್ನು ಹಚ್ಚುತ್ತಾರೆ. ಈ ಶೇಡಿಕಂಬವನ್ನು ಜಾತ್ರೆಯ ಒಂದು ದಿನ ಮೊದಲು ಸಂಕ್ರಾಂತಿಯ ದಿನದಂದು ಗ್ರಾಮಸ್ಥರೆಲ್ಲರೂ ಸೇರಿ ಏರಿಸುತ್ತಾರೆ. ಈ ದಿನ ಅಡಿಅಕ್ಕಿ ಒಯ್ಯುವ ಪದ್ಧತಿಯನ್ನೂ ಕೂಡ ಮಾಡುತ್ತಾರೆ. ಜಾತ್ರೆ ನಡೆಯುವ ಒಂದು ವಾರ ಮೊದಲು ರಾತ್ರಿ ವೇಳೆ ಗ್ರಾಮದಲ್ಲಿ ಸಂಚರಿಸಿ ಚರು ಹಾಕುವ ಪದ್ಧತಿಯನ್ನು ನಡೆಸಲಾಗುತ್ತದೆ.

ಜಾತ್ರೆಯ ಪ್ರಥಮ ದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ತಮ್ಮತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಸಂತಾನಭಾಗ್ಯ ಇಲ್ಲದಿರುವವರು, ಕೆಲವು ರೋಗರುಜಿನಗಳಿಂದ ಬಳಲುತ್ತಿರುವವರು ಹಾಗೂ ಇನ್ನಿತರ ಸಮಸ್ಯೆಗಳಿಗಾಗಿ ಚಿನ್ನದ ಶಿಶು ಮತ್ತು ಶೇಡಿಮರದ ಹರಕೆಯನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಈ ಎಲ್ಲ ಹರಕೆಗಳನ್ನು ಮುಂದಿನ ವರ್ಷದ ಜಾತ್ರೆಯ ದಿನ ಬಂದು ಒಪ್ಪಿಸಿ ಹೋಗುತ್ತಾರೆ. ಕೆಲವು ವರ್ಗದ ಮನೆಯವರು ಭೋಗದ ಬುಟ್ಟಿಯ ಸೇವೆ ಒಪ್ಪಿಸುವುದು ಇಲ್ಲಿನ ವಾಡಿಕೆ. ದೇವಸ್ಥಾನದಲ್ಲಿ ಪ್ರತಿನಿತ್ಯ ಕೂಡ ಪೂಜೆ ನಡೆಯುತ್ತದೆ.

ದೇವಸ್ಥಾನದ ಸುತ್ತಲೂ ಜಾತ್ರೆಯ ದಿನ ಅನೇಕ ಅಂಗಡಿ ಮುಗ್ಗಟ್ಟುಗಳನ್ನು ಹಾಕಲಾಗುತ್ತದೆ. ಮಿಠಾಯಿ ಅಂಗಡಿ, ಬಳೆ ಅಂಗಡಿ, ಮಕ್ಕಳ ಆಟಿಕೆ ಅಂಗಡಿ, ಹೋಟೆಲ್‌ ಗಳ ಜೊತೆ ಇನ್ನೂ ಅನೇಕ ಬಗೆಯ ಅಂಗಡಿಕಾರರು ತಮ್ಮ ವ್ಯವಹಾರವನ್ನು ನಡೆಸುತ್ತಾರೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರಾವಳಿಯ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನ ಕಾರ್ಯಕ್ರಮ ನಡೆಯುತ್ತದೆ.

300x250 AD

ಜಾತ್ರೆಯ ಎರಡನೇ ದಿನ ಶೇಡಿಮರ ಆಡುವುದೊಂದನ್ನು ಹೊರತುಪಡಿಸಿ, ಇನ್ನುಳಿದ ಎಲ್ಲಾ ಸೇವೆಗಳು ಕೂಡ ನಡೆಯುತ್ತದೆ.

ಪ್ರತಿವರ್ಷ ಸಂಕ್ರಾಂತಿಯ ಸಮಯದಲ್ಲಿ ಈ ಜಾತ್ರೆ ನಡೆಯುತ್ತದೆ.  ಹೀಗೆ ವರ್ಷಕ್ಕೊಮ್ಮೆ ಬರುವ “ನಮ್ಮೂರ ಹಬ್ಬ ಶ್ರೀ ಶೇಡಬರಿ ಜಾತ್ರೆ ” ಗೆ ತಾವುಗಳೂ ಬನ್ನಿ ಹಾಗೂ ತಮ್ಮವರನ್ನೂ ಕೂಡ ಕರೆತನ್ನಿರಿ.

ರಾಮ ಹೆಬಳೆ, ಶೇಡಬರಿ, ಭಟ್ಕಳ

Share This
300x250 AD
300x250 AD
300x250 AD
Back to top