ಯಲ್ಲಾಪುರ: ಇಲ್ಲಿನ ತಾಲೂಕು ಪಂಚಾಯತ್ ಆವಾರದ ಗಾಂಧಿ ಕುಟೀರದಲ್ಲಿ ಸಂಕಲ್ಪ ಉತ್ಸವದ ನಾಲ್ಕನೇ ದಿನದ ಕಾರ್ಯಕ್ರಮವನ್ನು ಸುವರ್ಣ ಟಿವಿ ಮುಖ್ಯಸ್ಥ ಅಜಿತ ಹನುಮಕ್ಕನವರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಮಾಜದಲ್ಲಿ ನಿರಂತರತೆ ಎಂದರೆ ಏನು ಎನ್ನುವುದನ್ನು ಪ್ರಮೋದ ಹೆಗಡೆಯವರನ್ಮು ನೋಡಿ ಕಲಿಯಬೇಕು. ಊರಿಗೊಬ್ಬರಲ್ಲದಿದ್ದರು, ತಾಲೂಕಿಗೊಬ್ಬರು ಇಂಥವರು ಇರಬೇಕು ಎಂದು ಹೇಳಿದರು.
ಈ ಜಿಲ್ಲೆ ನನಗೆ ಆದರ ಪ್ರೀತಿ ನೀಡಿದೆ. ನನ್ನ ಪತ್ನಿ ಕೂಡ ಇದೇ ಜಿಲ್ಲೆಯವರು. ಪ್ರಕೃತಿ ಮತ್ತು ಸಂಸ್ಕೃತಿ ಉ.ಕ ಜಿಲ್ಲೆಗೆ ದಾರಾಳವಾಗಿ ಸಿಕ್ಕಿದೆ. ಯಾವ ದೇಶಕ್ಕೂ ಪ್ರವಾಸಕ್ಕೆ ಹೋದರೂ ನಮ್ಮ ಉತ್ತರಕನ್ನಡದಲ್ಲಿ ಏನೆಲ್ಲಾ ಮಾಡಬಹುದು ಎನ್ನುವ ವಿಚಾರ ಮೂಡುತ್ತಿತ್ತು. ಅಂತಹ ಪ್ರಾಕೃತಿಕ ಸಂಪತ್ತು ಈ ಜಿಲ್ಲೆಯಲ್ಲಿದೆ ಎಂದರು.
ಇಸ್ರೇಲ್ ಮೇಲೆ ಪ್ರಪಂಚದ ಘೋರ ಭಯೋತ್ಪಾದಕ ದಾಳಿಯಾಗಿದೆ 7ನೇ ತಾರಿಖಿಗೆ ಒಂದು ತಿಂಗಳು ಕಳೆಯುತ್ತದೆ. ಇಸ್ರೇಲ್ ಅತ್ಯಂತ ಚಿಕ್ಕ ದೇಶ, ಎಲ್ಲ ದಾಳಿಯನ್ನು ಎದುರಿಸುತ್ತೆನೆ ಎಂದು ನಿಂತಿದೆ. ಇಂತಹುದೇ ದಾಳಿ ಪಾಕಿಸ್ತಾನದಿಂದ ಬಂದು ಮುಂಬೈ ಮೇಲೆ ದಾಳಿ ಮಾಡಿರುವುದು ಹೋಲಿಕೆ ಮಾಡಬಹುದು. ಮನುಷ್ಯನಿಗೆ ಭದ್ರತೆ ಭಾವನೆ ಇದ್ದರೇ ಅದರಂತಹ ಸುಖ ಯಾವುದುಊ ಇಲ್ಲ. ನೀವು ಯಾವುದೇ ಪಕ್ಷ ವ್ಯಕ್ತಿಗೆ ಮತ ಹಾಕುವಾಗ ನಿಮ್ಮ ಸಣ್ಣ ಮಕ್ಕಳು, ಮೊಮ್ಮಕ್ಕಳು ನೆನಪಿಗೆ ಬರಬೇಕು ಅವರ ಭವಿಷ್ಯಕ್ಕಾಗಿ ಮತ ನೀಡಿ, ಜಾಗತಿಕ ಇತಿಹಾಸದಲ್ಲಿ ಏಟು ತಿಂದ ದೇಶಗಳು ತಲೆ ಎತ್ತಿ ನಿಂತಿರುವುದು ಇಸ್ರೇಲ್ ಜಪಾನ್ ನೋಡಿದಾಗ ಕಂಡುಬರುತ್ತದೆ ಎಂದರು.
ನಮ್ಮ ಇತಿಹಾಸ, ಪ್ರಪಂಚದ ಇತಿಹಾಸದಿಂದ ಬೇರೇ ಬೇರೆ ದೇಶದಲ್ಲಾದ ಅನಾಹುತಗಳಿಂದ ಭಾರತ ಪಾಠ ಕಲಿಯಬೇಕು. ಸ್ವಾಭಿಮಾನದ ದೇಶ, ಸ್ವಾವಲಂಬನೆಯ ದೇಶವಾಗಬೇಕು. ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯ ದೇಶವಾಗಿರುವ ನಾವು ಆ ಮಾರ್ಗದಲ್ಲಿದ್ದೇವೆ ಎನ್ನುವ ವಿಶ್ವಾಸ ನನ್ನದು. ತಾಂತ್ರಿಕತೆಯಲ್ಲಿ ನಾವು ಮುಂದಿದ್ದೆವೆ. ಒಂದು ದೇಶ ನಿರ್ಧಾರ ಮಾಡಿದರೇ ಏನು ಮಾಡಿ ತೋರಿಸಬಹುದು ಎನ್ನುವುದಕ್ಕೆ ನಮ್ಮ ದೇಶ ಉದಾಹರಣೆ ನಮ್ಮನ್ನು ನೋಡಿ ಕಲಿತುಕೊಳ್ಳುವುದು ಬಹಳಷ್ಟಿದೆ. ಇತಿಹಾಸದಲ್ಲಿ ಆದ ತಪ್ಪುಗಳು ಮತ್ತೆ ಆಗಬಾರದು ಎಂದು ಹೇಳಿದರು.
ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಸಂಘಟನೆಗಳನ್ನು ಉಳಿಸಿ ಬೆಳೆಸುವುದು ಕಷ್ಟದ ಕೆಲಸ. 37 ವರ್ಷದಿಂದ ಬಹಳಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದ್ದಾರೆ. ಜಿಲ್ಲೆಯ ಜನರಾದ ನಮಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಭವಿಷ್ಯದ ಮಕ್ಕಳಿಗಾಗಿ ನಮ್ಮ ಸಂಸ್ಕೃತಿಯನ್ನು ಮುಂದುವರೆಸಲು ಯಾವುದೇ ಕಾರ್ಯಕ್ರಮದಲ್ಲಿ ಅವರಿಗಾಗಿ ಕೆಲವು ಸಮಯ ಮೀಸಲಿಡಬೇಕು. ರಾಷ್ಟ್ರೀಯ ವಿಚಾರಧಾರೆಗಳನ್ನು ಹಾಗೂ ನಮ್ಮ ಸಂಸ್ಕೃತಿಯನ್ನು ಯುವಕರಿಗೆ ತಲುಪಿಸುವ ಕಾರ್ಯ ಎಲ್ಲ ಕಾರ್ಯಕ್ರಮ ನಡೆಯಬೇಕೆಂದರು.
ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿದರು. ಜನಮಾಧ್ಯಮ ಸಂಪಾದಕ ಪ್ರವೀಣ ಹೆಗಡೆ, ಕಲಾಪೋಷಕ ಎಂ.ಆರ್.ಹೆಗಡೆ, ಸುದರ್ಶನ ಸೇವಾ ಸಂಸ್ಥೆಯ ಅಧ್ಯಕ್ಷ ಗಣಪತಿ ಮಾನಿಗದ್ದೆ, ಸಹಕಾರಿ ಧುರೀಣ ಡಿ.ಶಂಕರ ಭಟ್ಟ, ಯಕ್ಷಗಾನ ಕಲಾವಿದ ಸಬ್ರಹ್ಮಣ್ಯ ಚಿಟ್ಟಾಣಿ, ಆರ್‌ಎಸ್ಎಸ್ ಪ್ರಮುಖ ಗಣಪತಿ ಹಿರೇಸರ್ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ಸಂಶೋಧಕರಾದ ಗೋಪಾಲಕೃಷ್ಣ ಹೆಗಡೆ ಬಾರೆ ಹಾಗೂ ರೈತ ಹೋರಾಟಗಾರ ಪಿ.ಜಿ.ಭಟ್ಟ ಬರಗದ್ದೆಯವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಭಾತ ಭಟ್ಟ ವಂದೆಮಾತರಂ ಹಾಡಿದರು. ಸಂಕಲ್ಪ ಕಾರ್ಯದರ್ಶಿ ಪ್ರಸಾದ ಹೆಗಡೆ ಸ್ವಾಗತಿಸಿದರು, ಪ್ರಾಸ್ತಾವಿಕಗೈದರು, ವಿದ್ಯಾ ಭಟ್ ಮತ್ತು ಶಿಕ್ಷಕ ಸುಬ್ರಾಯ ಭಟ್ಟ ನಿರೂಪಿಸಿದರು. ವಿಘ್ನೇಶ್ವರ ಹೆಗಡೆ ಕೊನೆಯಲ್ಲಿ ವಂದಿಸಿದರು.