ಸಾಗರ: ನಗರದ ಶ್ರೀ ಸದ್ಗುರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ವೇದನಾದ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ನಾದೋಪಾಸನೆ’ ಕಾರ್ಯಕ್ರಮವು ಸಂಭ್ರಮದಿಂದ ಯಶಸ್ವಿಗೊಂಡಿತು. ಕಾರ್ಯಕ್ರಮವನ್ನು ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ವೇದನಾದ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ವಿದ್ವಾನ್ ನರಸಿಂಹಮೂರ್ತಿ ಶರ್ಮ ಹಾಗೂ ಸಂಗೀತ ಗುರುಗಳಾದ ವಿದುಷಿ ಶ್ರೀಮತಿ ವಸುಧಾ ಶರ್ಮ ಗುರುಗಳಾದ ಪಂಡಿತ್ ಮೋಹನ್ ಹೆಗಡೆ ಮತ್ತು ಶ್ರೀಮತಿ ವರಮಹಾಲಕ್ಷ್ಮಿ ದಂಪತಿಗಳಿಗೆ ಸನ್ಮಾನಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಪೃಥಾ ಭೂಷಣ್ ಹುಬ್ಬಳ್ಳಿ, ಕುಮಾರಿ ಇಂಚರ ಮಂಕಾಳೆ, ಕುಮಾರಿ ಸಾಕ್ಷಿ ಸಾಗರ, ಕುಮಾರ ಶ್ರವಣ ಕೋಣನಕಟ್ಟೆ, ಕುಮಾರಿ ಶ್ರಾವ್ಯ ಕೋಣನಕಟ್ಟೆ, ಕುಮಾರಿ ಸಂಜನಾ ಕೆ.ಆರ್., ಕುಮಾರಿ ಅಕ್ಷತಾ, ಶ್ರೀಮತಿ ನಾಗರತ್ನ ನಿಟ್ಟೂರು ಇವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯನವನ್ನು ನಡೆಸಿಕೊಟ್ಟರು. ಇವರಿಗೆ ತಬಲಾದಲ್ಲಿ ವಿದ್ವಾನ್ ನಿಖಿಲ್ ಬಿ. ಕುಂಸಿ ಸಾಗರ ಮತ್ತು ವಿದ್ವಾನ್ ಮಂಜುನಾಥ್ ಮೋಟಿನ್ಸರ ಶಿರಸಿ, ಮೃದಂಗದಲ್ಲಿ ವಿದ್ವಾನ್ ಹೆಚ್. ಎನ್ ನರಸಿಂಹಮೂರ್ತಿ, ಹಾಗೂ ಸಂವಾದಿನಿಯಲ್ಲಿ ಸಂವತ್ಸರ ಹಾಗೂ ಕುಮಾರಿ ಶ್ರೀರಂಜಿನಿ ಇವರುಗಳು ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಸಂಗೀತ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟು, ಶಾಸ್ತ್ರೀಯ ಸಂಗೀತದ ಅಭ್ಯಾಸದ ಅನೇಕ ದೃಷ್ಟಿಕೋನವನ್ನು ಹಾಗೂ ಪುರಾತನ ಭಾರತೀಯ ಸಂಗೀತ ಅಭ್ಯಾಸದ ಕೌಶಲ್ಯ ಹಾಗೂ ವಿಧಾನವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.