ಭಟ್ಕಳ: ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿತ್ತೆಯಲ್ಲಿ ರಸ್ತೆಗೆ ಹೊಂದಿಕೊಂಡಿರುವ ಗುಡ್ಡ ಪ್ರದೇಶವು ಕುಸಿದು ಬಿದ್ದಿದ್ದು, ಇದೀಗ ಅಲ್ಲಿಯೇ ಇರುವ ದೊಡ್ಡ ಬಂಡೆಕಲ್ಲು ಉದುರಿ ಬೀಳುವ ಆತಂಕ ಸ್ಥಳೀಯರಿಗೆ ಎದುರಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗುಡ್ಡ ಪ್ರದೇಶದ ಮಣ್ಣು ಸಡಿಲಗೊಂಡು ಈ ಅವಘಡ ಸಂಭವಿಸಿದೆ. ಈ ರಸ್ತೆಯ ಪಕ್ಕದಲ್ಲಿಯೇ ಹಲವು ಮನೆಗಳಿದ್ದು ದಿನನಿತ್ಯವೂ ಶಾಲಾ ಮಕ್ಕಳು ಸೇರಿದಂತೆ ಅನೇಕರು ಓಡಾಡುತ್ತಿರುತ್ತಾರೆ. ಅಲ್ಲದೇ, ಮಣ್ಣು ಕುಸಿದ ಸ್ಥಳದಲ್ಲಿಯೇ ದೊಡ್ಡ ಬಂಡೆ ಕಲ್ಲು ಉರುಳಿ ಬರವ ಸಾಧ್ಯತೆಯಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ತಾಲೂಕಾಡಳಿತ ಶೀಘ್ರದಲ್ಲೇ ಬಂಡೆಕಲ್ಲು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಸೀಲ್ದಾರ ತಿಪ್ಪೇಸ್ವಾಮಿ ಹಾಗೂ ಮಾರುಕೇರಿ ಗ್ರಾ.ಪಂ ಅಧ್ಯಕ್ಷೆ ನಾಗವೇಣಿ ಗೊಂಡ, ಉಪಾಧ್ಯಕ್ಷ ಎಂ.ಡಿ.ನಾಯ್ಕ ಭೇಟಿ ನೀಡಿ, ಬಂಡೆಕಲ್ಲು ತೆರವುಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ.