ಗೋಕರ್ಣ: ಇಲ್ಲಿಯ ಸಮೀಪದ ಬೇಲೆಕಾನ-ಅಶೋಕೆ ನಡುವೆ ಇದ್ದ ಒಂದು ಚಿಕ್ಕ ಸೇತುವೆ ನಾಶವಾಗಿ ದಶಕಗಳು ಕಳೆದರೂ ಕೂಡ ಇನ್ನುವರೆಗೂ ಸೇತುವೆ ನಿರ್ಮಿಸಿದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಮಳೆಗಾಲದಲ್ಲಿ ನೀರು ಹರಿಯುವುದರಿಂದ ಇದನ್ನು ದಾಟಿ ಹೋಗುವುದು ತುಂಬ ಕಷ್ಟವಾಗಿತ್ತು. ಅದರಂತೆ ಪ್ರವಾಸಿಗರಿಗೂ ಕೂಡ ಮಳೆಗಾಲ ಮತ್ತು ಬೇಸಿಗೆಗಾಲದಲ್ಲಿ ವಾಹನ ಸಂಚರಿಸಲು ಸಾಧ್ಯವಾಗದ ಸ್ಥಿತಿಯಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಶೋಕೆ ಭಾಗಕ್ಕೆ ಜನರು ಇಲ್ಲಿ ಸೇತುವೆ ನಿರ್ಮಿಸುವವರೆಗೂ ನಾವು ಮತದಾನ ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಇದರಿಂದಾಗಿ ಎಚ್ಚೆತ್ತ ತಾಲೂಕು ಆಡಳಿತ ಸ್ಥಳಕ್ಕೆ ಆಗಮಿಸಿ ಚುನಾವಣೆ ಮುಗಿದ ನಂತರ ಸೇತುವೆ ನಿರ್ಮಿಸಿಕೊಡಲಾಗುವುದು. ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕರಿಸುವುದು ಸರಿಯಲ್ಲ ಎಂದು ಸ್ಥಳೀಯರ ಮನವೊಲಿಸಿದ್ದರು.
ಸರಕಾರ ರಚನೆಯಾಗಿ 100 ದಿನ ಕಳೆದರೂ ಕೂಡ ಯಾವ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ. ಹೀಗಾಗಿ ಸ್ಥಳೀಯರ ಆಕ್ರೋಶ ಹೆಚ್ಚಿದಂತಾಗಿದೆ. ಲೋಕಸಭಾ ಚುನಾವಣೆ ಒಳಗೆ ಇಲ್ಲಿ ಸೇತುವೆ ನಿರ್ಮಾಣ ಮಾಡದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡಲು ಸ್ಥಳೀಯರು ನಿರ್ಧರಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಾಗಿದೆ.
ಇದು ಕೇವಲ ಸ್ಥಳೀಯ ಗ್ರಾಮದವರಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಕಿರಿ ಸೇತುವೆ ನಿರ್ಮಾಣಗೊಂಡರೆ ಪ್ರವಾಸಿಗರಿಗೆ ಕೂಡ ಹೆಚ್ಚಿನ ಅನುಕೂಲವಾಗಲಿದೆ. ಇಲ್ಲಿಂದ ಅಶೋಕೆ ಮಾರ್ಗವಾಗಿ ಗೋಕರ್ಣಕ್ಕೆ ತೆರಳಲು ಬಲು ಹತ್ತಿರದ ದಾರಿಯಾಗಿದೆ. ಇಲ್ಲದಿದ್ದರೆ ಸುತ್ತುಬಳಸಿ ಬರಬೇಕಾದ ಸ್ಥಿತಿ ಪ್ರವಾಸಿಗರದ್ದಾಗಿದೆ. ಇನ್ನಾದರೂ ಅಧಿಕಾರಿ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಈ ಬಾರಿ ಚುನಾವಣೆ ಬಹಿಷ್ಕಾರದ ಸಾಧ್ಯತೆಯಿದೆ.